ಇಂಗ್ಲೆಂಡ್: ಪ್ರಪಂಚದಾದ್ಯಂತ ಹರಡಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಲಸಿಕೆ ಕಂಡು ಹಿಡಿಯಲಾಗಿಲ್ಲ. ಆದರೆ ಅನೇಕ ದೇಶಗಳು ಔಷಧಿ ಕಂಡು ಹಿಡಿಯಲು ಕೆಲಸ ಮಾಡ್ತಿದ್ದು, ಇದೀಗ ಇಂಗ್ಲೆಂಡ್ನ ಆಕ್ಸ್ಫರ್ಡ್ ವಿವಿ ಕಂಡು ಹಿಡಿದಿರುವ ಲಸಿಕೆಯ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂದು ಅಲ್ಲಿನ ವಿಜ್ಞಾನಿಗಳು ತಿಳಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಲ್ಯಾನ್ಲೆಟ್ ಎಂಬ ಪತ್ರಿಕೆ ಮಾಹಿತಿ ಹಂಚಿಕೊಂಡಿದೆ. ಏಪ್ರಿಲ್ ತಿಂಗಳಿನಿಂದ ವಿಜ್ಞಾನಿಗಳು ಈ ಲಸಿಕೆ ಕಂಡು ಹಿಡಿದು, ಇಲ್ಲಿಯವರೆಗೆ 1,000 ಜನರ ಮೇಲೆ ಪ್ರಯೋಗ ನಡೆಸಲಾಗಿದ್ದು, ಅದು ಯಶಸ್ವಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಕಾರ್ಯ ಮಾಡುತ್ತಿದೆ ಎಂಬುದು ಪ್ರಯೋಗದಿಂದ ತಿಳಿದು ಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಆಡ್ರಿಯನ್ ಹಿಲ್ ಮಾತನಾಡಿದ್ದು, ಈ ಲಸಿಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ 18ರಿಂದ 55 ವರ್ಷದವರನ್ನ ಪ್ರಯೋಗಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಮೊದಲ ಹಂತ ಪ್ರಯೋಗ ಯಶಸ್ವಿಯಾಗಿದ್ದು, ಎರಡನೇ ಹಂತದ ಪ್ರಯೋಗ ಮುಂದುವರೆದಿದೆ ಎಂದು ತಿಳಿದು ಬಂದಿದೆ.