ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ವಿರುದ್ಧ ವಿಶ್ವದ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿ, ಆರ್ಥಿಕ ನಿರ್ಬಂಧ ಹೇರಿವೆ. ಇದೀಗ ಮಾಸ್ಟರ್ ಕಾರ್ಡ್ ಮತ್ತು ವೀಸಾ ಕಂಪನಿಗಳು ರಷ್ಯಾದ ಬ್ಯಾಂಕ್ಗಳ ಮೇಲೆ ನಿರ್ಬಂಧ ವಿಧಿಸಿವೆ.
ಕ್ರೆಡಿಟ್ ಕಾರ್ಡ್ ದೈತ್ಯ ಮಾಸ್ಟರ್‌ಕಾರ್ಡ್ ಮತ್ತು ವೀಸಾ ರಷ್ಯಾದಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿವೆ ಎಂದು ದೃಢಪಡಿಸಿವೆ. ಇದು ರಷ್ಯಾದ ಆರ್ಥಿಕತೆ ಮೇಲೆ ಭಾರೀ ಪೆಟ್ಟು ನೀಡುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಅಮೆರಿಕ ರಷ್ಯಾದ ಜೊತೆಗಿನ ಆರ್ಥಿಕ ವ್ಯವಹಾರವನ್ನು ನಿರ್ಬಂಧಿಸಿದ ಬಳಿಕ, ಮಾಸ್ಟರ್‌ಕಾರ್ಡ್ ಮತ್ತು ವೀಸಾ ಸಂಸ್ಥೆಗಳೂ ಇದೇ ಹಾದಿಯನ್ನು ತುಳಿದಿವೆ.
ರಷ್ಯಾದಲ್ಲಿ ತಮ್ಮ ಕಂಪನಿಯ ಕಾರ್ಡ್ ಬಳಕೆಯನ್ನು ನಿಷೇಧಿಸಲಾಗಿದೆ. ಮುಂದಿನ ಆದೇಶದವರೆಗೂ ಇದು ಮುಂದುವರಿಯಲಿದೆ ಎಂದು ಮಾಸ್ಟರ್‌ಕಾರ್ಡ್ ಹೇಳಿಕೆ ನೀಡಿದೆ. ಇದಲ್ಲದೇ, ವೀಸಾ ಕೂಡ ರಷ್ಯಾದಲ್ಲಿ ತನ್ನ ಗ್ರಾಹಕರ ಕಾರ್ಡ್ಗಳ ಬಳಕೆಗೆ ನಿರ್ಬಂಧ ವಿಧಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ನಿರ್ಬಂಧ ಹೇರುವ ಬಗ್ಗೆ ಘೋಷಿಸಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಈ ಕಾರ್ಡ್ದಾರರಿಗೆ ಹಣ ಸಿಗುತ್ತಿಲ್ಲ. ರಷ್ಯಾದ ಎಟಿಎಂಗಳ ಮುಂದೆ ಸರತಿ ಸಾಲು ಕಂಡು ಬರುತ್ತಿದೆ. ರೂಬೆಲ್ ಮೌಲ್ಯ ಕಳೆದುಕೊಳ್ಳುತ್ತಿದೆ. ರಷ್ಯಾದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ವರದಿಗಳಾಗುತ್ತಿವೆ.
ಪುಟಿನ್ ಪ್ರತಿ ನಿರ್ಬಂಧ: ಇನ್ನು ತಮ್ಮ ದೇಶದ ಮೇಲೆ ಇತರ ರಾಷ್ಟ್ರಗಳು ಹೇರಿದ ನಿರ್ಬಂಧದ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಜನರು ವಿದೇಶಿ ಬ್ಯಾಂಕ್ಗಳಿಂದ 10 ಸಾವಿರ ಡಾಲರ್ಗಿಂತಲೂ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವುದನ್ನು ನಿರ್ಬಂಧಿಸಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.
ರಷ್ಯಾ ಕರೆನ್ಸಿಯಾದ ರೂಬಲ್ ಡಾಲರ್ ಮುಂದೆ ಭಾರಿ ಕುಸಿತ ಕಂಡ ಬಳಿಕ ಜನರು ತಮ್ಮ ಹಣವನ್ನು ಪಡದುಕೊಳ್ಳಲು ಎಟಿಎಂ ಮುಂದೆ ಸಾಲುಗಟ್ಟಿ ನಿಂತಿದ್ದರು. ಇದನ್ನು ತಡೆಯಲು ಸರ್ಕಾರ ಇದೀಗ ವಿದೇಶಿ ಕರೆನ್ಸಿಯ ಬಳಕೆಯ ಮೇಲೆ ನಿಷೇಧ ಹೇರಿದೆ. ಅಲ್ಲದೇ, ವಿದೇಶಿ ಬ್ಯಾಂಕ್ನಲ್ಲಿ ಹಣದ ಹೂಡಿಕೆ ಮತ್ತು ಸಾಲ ಸೌಲಭ್ಯ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಆಪಲ್ನಿಂದಲೂ ಶಾಕ್: ರಷ್ಯಾದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವುದು ಮತ್ತು ರಫ್ತು ಮಾಡುವುದನ್ನು ನಿಲ್ಲಿಸಲಾಗುವುದು ಎಂದು ಆಪಲ್ ಸಂಸ್ಥೆ ಘೋಷಿಸಿದೆ. ಅಲ್ಲದೇ, ಸರ್ಕಾರಿ ಮಾಧ್ಯಮಗಳಾದ ಆರ್ಟಿ ನ್ಯೂಸ್, ಸ್ಪುಟ್ನಿಕ್ ನ್ಯೂಸ್ ಅನ್ನು ರಷ್ಯಾದ ಹೊರತಾದ ದೇಶಗಲ್ಲಿ ಸಿಗದಂತೆ ಆ್ಯಪ್ ಸ್ಟೋರ್ನಲ್ಲಿ ನಿರ್ಬಂಧಿಸಲಾಗಿದೆ. ಮೆಟಾ, ಗೂಗಲ್, ಟಿಕ್ಟಾಕ್, ಯೂಟ್ಯೂಬ್ ಕೂಡ ಈ ಹಿಂದೆ ನಿರ್ಬಂಧ ಹೇರಿ ಘೋಷಿಸಿವೆ.
ಓದಿ: ಉಕ್ರೇನ್ ಮೇಲೆ ಮುಂದುವರಿದ ರಷ್ಯಾ ಆಕ್ರಮಣ... ಇತರ ದೇಶಗಳ ಮೇಲೂ ಬೀರಿತು ಭಾರಿ ಪರಿಣಾಮ!