ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಸಿ 29 ದಿನಗಳಾಗಿವೆ. ರಷ್ಯಾಗೆ ಶರಣಾಗಲು ಸುತಾರಾಂ ಒಪ್ಪದ ಉಕ್ರೇನ್ ಮೇಲೆ ನಿರಂತರ ಬಾಂಬ್ ದಾಳಿ ಮುಂದುವರಿಸಿದೆ. ಇದೀಗ ತನ್ನ ದೇಶದ ಮೇಲೆ ರಷ್ಯಾ ರಂಜಕ ಬಾಂಬ್ಗಳನ್ನು ಹಾಕುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬೆಳಗ್ಗೆಯಿಂದ ರಷ್ಯಾ ತನ್ನ ದೇಶದ ಮೇಲೆ ರಂಜಕ ತುಂಬಿದ ಬಾಂಬ್ಗಳನ್ನು ಹಾಕಿ ವಿಧ್ವಂಸಕ ಕೃತ್ಯ ಎಸಗುತ್ತಿದೆ. ಇದನ್ನು ತಡೆಯಲು ನ್ಯಾಟೋ ರಾಷ್ಟ್ರಗಳು ನಮಗೆ ಅನಿಯಂತ್ರಿತ ಶಸ್ತ್ರಾಸ್ತ್ರ ಸಹಾಯ ಮಾಡಬೇಕು ಎಂದು ಝೆಲೆನ್ಸ್ಕಿ ಕೋರಿದ್ದಾರೆ. ದೇಶದ ಜನರು ಮತ್ತು ನಗರಗಳನ್ನು ಉಳಿಸಲು ಉಕ್ರೇನ್‌ಗೆ ಯಾವುದೇ ನಿರ್ಬಂಧಗಳಿಲ್ಲದೆ ಮಿಲಿಟರಿ ನೆರವು ಬೇಕಾಗಿದೆ. ರಷ್ಯಾ ತನ್ನ ಸಂಪೂರ್ಣ ಶಸ್ತ್ರಾಸ್ತ್ರಗಳನ್ನು ನಿರ್ಬಂಧಗಳಿಲ್ಲದೆ ಬಳಸುತ್ತಿದೆ ಎಂದು ಅವರು ನ್ಯಾಟೋ ಪ್ರತಿನಿಧಿಗಳಿಗೆ ಕಳುಹಿಸಿದ ವಿಡಿಯೋದಲ್ಲಿ ಹೇಳಿದ್ದಾರೆ.
ನ್ಯಾಟೋ ರಾಷ್ಟ್ರಗಳು ತಮಗೆ ಇಲ್ಲಿಯವರೆಗೂ ಶಸ್ತ್ರಾಸ್ತ್ರ ಸಹಾಯ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ಉಕ್ರೇನ್ ಅಧ್ಯಕ್ಷ, ಇನ್ನು ಮುಂದೆ ಇನ್ನಷ್ಟು ಪ್ರಭಾವಿ ಶಸ್ತ್ರಾಸ್ತ್ರಗಳ ನೆರವು ನೀಡಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳು ಬಳಸುವ ವಿಮಾನಗಳಲ್ಲಿ ಒಂದು ಅಂಶದಷ್ಟು ನಮಗೆ ನೀಡಬೇಕು. ಅಲ್ಲದೇ, ಯುದ್ಧ ಟ್ಯಾಂಕರ್ಗಳನ್ನೂ ಕೂಡ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇಂಗ್ಲೆಂಡ್ನಿಂದ ಇನ್ನಷ್ಟು ಸಹಾಯ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ 4 ಸಾವಿರ ಎನ್ಎಲ್ಎಡಬ್ಲ್ಯೂ ಮತ್ತು ಜಾವೆಲಿನ್ ಕ್ಷಿಪಣಿಗಳನ್ನು ನೀಡಿದ್ದ ಇಂಗ್ಲೆಂಡ್ ಇದೀಗ 6 ಸಾವಿರ ಕ್ಷಿಪಣಿಗಳನ್ನು ನೀಡಲು ಮುಂದಾಗಿದೆ. ಅತಿವೇಗದ ಗಾಳಿಯನ್ನು ಸೀಳಿ ಮುನ್ನಡೆಯುವ ಕ್ಷಿಪಣಿಗಳನ್ನು ನೀಡುತ್ತಿದ್ದು, ಇವು ಉಕ್ರೇನಿಯನ್ನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದಲ್ಲದೇ, ಉಕ್ರೇನಿಯನ್ ಮಿಲಿಟರಿಗೆ 25 ಮಿಲಿಯನ್ ಯುರೋ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
ಇದನ್ನೂ ಓದಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ: ಪಠ್ಯ ಪುಸ್ತಕ ಮುದ್ರಣಕ್ಕೂ ನೂರೆಂಟು ಅಡ್ಡಿ