ಕೀವ್(ಉಕ್ರೇನ್) : ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರ ಕಾರ್ಕಿವ್‌ನಲ್ಲಿರುವ ಗ್ಯಾಸ್ ಪೈಪ್‌ಲೈನ್ ಅನ್ನು ಸ್ಫೋಟಿಸಿದ ರಷ್ಯಾ ಸೇನೆ ಇದೀಗ ಉಕ್ರೇನ್‌ನ ಇಂಧನ ಸರಬರಾಜು ಕೇಂದ್ರ, ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಅಮೆರಿಕ, ಫ್ರಾನ್ಸ್, ಜರ್ಮನಿ ರಾಷ್ಟ್ರಗಳು ಉಕ್ರೇನ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿರುವುದು ರಷ್ಯಾವನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ, ಉಕ್ರೇನ್‌ನ ರಾಜಧಾನಿ ಕೀವ್ನಲ್ಲಿ ಬಾಂಬ್ ಸ್ಫೋಟಿಸಿದ್ದಲ್ಲದೇ ಕಾರ್ಕಿವ್ ನಗರಕ್ಕೂ ನುಗ್ಗಿ ದಾಳಿ ಮುಂದುವರೆಸಿದೆ.
ಅಲ್ಲದೇ ಉಕ್ರೇನ್‌ನ ದಕ್ಷಿಣ ಮತ್ತು ಆಗ್ನೇಯದಲ್ಲಿರುವ ಖೆರ್ಸನ್ ಮತ್ತು ಬರ್ಡಿಯಾನ್ಸ್ಕ್ ನಗರಗಳನ್ನು ರಷ್ಯಾ ಪಡೆಗಳು ಮುತ್ತಿಗೆ ಹಾಕಿದೆ. ಇದೀಗ ಇಂಧನ ಸರಬರಾಜು ಕೇಂದ್ರ, ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ: ರಷ್ಯಾದೊಂದಿಗೆ 'ಬೆಲಾರಸ್'ನಲ್ಲಿ ಶಾಂತಿ ಮಾತುಕತೆ ತಳ್ಳಿ ಹಾಕಿದ ಉಕ್ರೇನ್ ಅಧ್ಯಕ್ಷ
ರಷ್ಯಾದ ಪಡೆಗಳಿಂದ ಪೂರ್ಣ ಪ್ರಮಾಣದ ದಾಳಿ ಸಾಧ್ಯತೆ ಹಿನ್ನೆಲೆ ಜನರು ಮೆಟ್ರೋ ನಿಲ್ದಾಣಗಳು, ನೆಲಮಾಳಿಗೆಗಳು, ಬಂಕರ್ಗಳು ಹಾಗೂ ಭೂಗತ ಗ್ಯಾರೇಜ್‌ಗಳಲ್ಲಿ ಅಡಗಿಕೊಂಡಿದ್ದಾರೆ.
ಈಗಾಗಲೇ ಉಕ್ರೇನ್‌ನಲ್ಲಿ 200ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 1,50,000ಕ್ಕೂ ಹೆಚ್ಚು ಜನರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಭಾರತ ಸೇರಿದಂತೆ ನಾನಾ ರಾಷ್ಟ್ರಗಳು ಅಲ್ಲಿ ಸಿಲುಕಿರುವ ತಮ್ಮ ವಿದ್ಯಾರ್ಥಿಗಳು ಹಾಗೂ ಪ್ರಜೆಗಳನ್ನು ಕರೆತರುತ್ತಿವೆ.