ಮಾಸ್ಕೋ: ರಷ್ಯಾದ ನೇರ ಹೂಡಿಕೆ ನಿಧಿ ಮತ್ತು ಖಜಕಿಸ್ತಾನ್‌ನ ಆರೋಗ್ಯ ಸಚಿವಾಲಯವು ರಷ್ಯಾದ ಸ್ಪುಟ್ನಿಕ್-ವಿ( Sputnik-V) ಲಸಿಕೆಯ ನೋಂದಣಿ, ಉತ್ಪಾದನೆ ಮತ್ತು ವಿತರಣೆಗೆ ಅನುಕೂಲವಾಗುವಂತೆ ಸಹಕಾರ ಒಪ್ಪಂದ ಮಾಡಿಕೊಂಡಿವೆ.
ರಷ್ಯಾದ ನೇರ ಹೂಡಿಕೆ ನಿಧಿಯ ಸಿಇಒ ಕಿರಿಲ್ ಡಿಮಿಟ್ರಿವ್ ಮತ್ತು ಖಜಕಿಸ್ತಾನ್‌ನ ಆರೋಗ್ಯ ಸಚಿವ ಅಲೆಕ್ಸಿ ತ್ಸಾಯ್ ಲಸಿಕೆ ಸಂಬಂಧ ನಡೆದ ಸಹಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಒಪ್ಪಂದದ ಪ್ರಕಾರ ಅನುಮೋದನೆ ಪಡೆದ ನಂತರ ಉತ್ಪಾದನಾ ತಂತ್ರಜ್ಞಾನ ಮತ್ತು ಎರಡು ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಗೆ ಬೇಕಾದ ವಸ್ತುಗಳನ್ನು ಖಜಕಿಸ್ತಾನ್‌ಗೆ ವರ್ಗಾಯಿಸಲಾಗುತ್ತದೆ.
ಪ್ರಸ್ತುತ ಬೆಲಾರಸ್ ಹಾಗೂ ಇತರ ದೇಶಗಳಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಹಂತ ಎರಡು ಹಾಗೂ ಮೂರು ಭಾರತದಲ್ಲಿ ನಡೆಯುತ್ತಿದೆ. ಇನ್ನು 1.2 ಶತಕೋಟಿಗಿಂತ ಹೆಚ್ಚಿನ ಲಸಿಕೆಗಾಗಿ 50 ಕ್ಕೂ ಹೆಚ್ಚು ದೇಶಗಳಿಂದ ಮನವಿ ಬಂದಿದೆ. ಭಾರತ, ಬ್ರೆಜಿಲ್, ಚೀನಾ, ದಕ್ಷಿಣ ಕೊರಿಯಾ ಮತ್ತು ಇತರ ನಾಲ್ಕು ದೇಶಗಳಲ್ಲಿನ ಆರ್‌ಡಿಐಎಫ್‌ನ ಅಂತಾರಾಷ್ಟ್ರೀಯ ಪಾಲುದಾರರು ಜಾಗತಿಕ ಮಾರುಕಟ್ಟೆಗೆ ಲಸಿಕೆ ಉತ್ಪಾದನೆಯ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ.
ನವೆಂಬರ್ 24 ರಂದು, 40,000 ಸ್ವಯಂ ಸೇವಕರ ಸಹಕಾರದಿಂದ ಅತಿದೊಡ್ಡ ಡಬಲ್ - ಬ್ಲೈಂಡ್, ರ‍್ಯಾಂಡೋಮೈಜಿಡ್, ಪ್ಲಸೀಬೊ-ನಿಯಂತ್ರಿತ ಹಂತ III ಕ್ಲಿನಿಕಲ್ ಪ್ರಯೋಗಗಳ ಎರಡನೇ ಮಧ್ಯಂತರ ದತ್ತಾಂಶ ವಿಶ್ಲೇಷಣೆಯು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಇದು ರಷ್ಯಾದ ಇತಿಹಾಸದಲ್ಲಿ ಮೊದಲ ಯಶಸ್ವಿ ಪ್ರಯೋಗವಾಗಿದೆ. ಈ ಮಧ್ಯಂತರ ಪ್ರಯೋಗ ಫಲಿತಾಂಶಗಳು ಸ್ಪುಟ್ನಿಕ್- ವಿ ಲಸಿಕೆಯ ಪರಿಣಾಮಕಾರಿ ಕೆಲಸವನ್ನು ಮತ್ತೊಮ್ಮೆ ದೃಢಪಡಿಸಿವೆ.
ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ಗೆ ಅನುಸಾರವಾಗಿ ಎರಡನೇ ನಿಯಂತ್ರಣ ಹಂತವನ್ನು ತಲುಪಿದ ನಂತರ ಲಸಿಕೆ ಅಥವಾ ಪ್ಲಸೀಬೊದ ಮೊದಲ ಡೋಸ್ (ಎರಡನೇ ಡೋಸ್ ನಂತರ 7 ದಿನಗಳು) ಪಡೆದ 28 ದಿನಗಳ ನಂತರ ಸ್ವಯಂಸೇವಕರಲ್ಲಿ ಮೌಲ್ಯಮಾಪನ ನಡೆಸಲಾಯಿತು. ಇದರಿಂದ ತಿಳಿದು ಬಂದಿದ್ದೇ ಶೇ 91.4ರಷ್ಟು ಪರಿಣಾಮಕಾರಿ ಫಲಿತಾಂಶ.
ಆರ್‌ಡಿಐಎಫ್ ಮತ್ತು ಖಜಕಿಸ್ತಾನ್ ಗಣರಾಜ್ಯದ ನಡುವಿನ ಒಪ್ಪಂದವು ದೇಶದ ಜನಸಂಖ್ಯೆಗೆ ಶೇ 91 ಕ್ಕಿಂತ ಹೆಚ್ಚು ಪರಿಣಾಮಕಾರಿ ಫಲಿತಾಂಶ ತಂದುಕೊಡಲಿದೆ ಎಂದು ಆರ್‌ಡಿಐಎಫ್‌ನ ಸಿಇಒ ಕಿರಿಲ್ ಡಿಮಿಟ್ರಿವ್ ಅವರು ಹೇಳಿದ್ದಾರೆ.