ಚೆರ್ನೋಬಿಲ್(ಉಕ್ರೇನ್): ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರೆಸಿದ್ದು, ಎರಡನೇ ದಿನದ ಕಾರ್ಯಾಚರಣೆಯಲ್ಲಿ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿವೆ. ಈಗ ಈ ಸ್ಥಾವರದ ಬಳಿ ವಿಕಿರಣ ಹೊರಸೂಸುವಿಕೆ ಪ್ರಮಾಣ ಹೆಚ್ಚಾಗಿದೆ. ಈ ಕುರಿತು ಅಂಕಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.
1986ರಲ್ಲಿ ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತ ಚೆರ್ನೋಬಿಲ್ನಲ್ಲಿ ನಡೆದಿದ್ದು, ಈ ಪ್ರದೇಶವವನ್ನು ರಷ್ಯಾದ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಉಕ್ರೇನ್ ಹೇಳಿತ್ತು. ಈಗ ಚೆರ್ನೊಬಿಲ್ನಲ್ಲಿ ವಿಕಿರಣ ಸಾಮಾನ್ಯ ಮಟ್ಟಕ್ಕಿಂತ 20 ಪಟ್ಟು ಹೆಚ್ಚಾಗಿದೆ ಎಂದು ವಿಕಿರಣ ಮೇಲ್ವಿಚಾರಣಾ ಕೇಂದ್ರಗಳು ವರದಿ ಮಾಡಿವೆ.
ವಿಕಿರಣ ಸೋರಿಕೆಯಾಗುತ್ತಿದ್ದರೂ, ಮತ್ತೊಂದು ಪರಮಾಣು ದುರಂತ ಅಸಂಭವವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ಥಾವರದ ಬಳಿ ಭಾರಿ ಮಿಲಿಟರಿ ವಾಹನಗಳ ಓಡಾಟದಿಂದ ವಿಕಿರಣ ಸೋರಿಕೆಯಾಗುತ್ತಿದೆ ಎಂದು ಉಕ್ರೇನ್‌ನ ಸ್ಟೇಟ್ ನ್ಯೂಕ್ಲಿಯರ್ ರೆಗ್ಯುಲೇಟರಿ ಇನ್‌ಸ್ಪೆಕ್ಟರೇಟ್ ವರದಿ ಮಾಡಿದೆ.
ಇದನ್ನೂ ಓದಿ: ಪ್ರಬಲ ಭೂಕಂಪಕ್ಕೆ ನಲುಗಿದ ಇಂಡೋನೇಷ್ಯಾ: 7 ಮಂದಿ ಸಾವು, 85 ಜನರಿಗೆ ಗಾಯ
ಚೆರ್ನೋಬಿಲ್ ರಿಯಾಕ್ಟರ್ ಈಗಾಗಲೇ ಹಾನಿಗೊಳಗಾಗಿದ್ದು, ವಿಕಿರಣದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.