ಸ್ಟಾಕ್ಹೋಮ್: ಜಾಗತಿಕ ಹಸಿವಿನ ಸಂಕಟ ನೀಗಿಸುವಲ್ಲಿ ಪ್ರಯತ್ನಿಸುತ್ತಿರುವ ವಿಶ್ವ ಆಹಾರ ಕಾರ್ಯಕ್ರಮಕ್ಕೆ (ಡಬ್ಲ್ಯುಎಫ್‌ಪಿ) 2020ರ ಪ್ರತಿಷ್ಠಿತ ಶಾಂತಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಓಸ್ಲೋದಲ್ಲಿನ ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರವನ್ನು ವರ್ಲ್ಡ್ ಫುಡ್ ಪ್ರೋಗ್ರಾಂಗೆ ನೀಡುವುದಾಗಿ ಘೋಷಿಸಿತು.
ನಾರ್ವೇಜಿಯನ್ ನೊಬೆಲ್ ಸಮಿತಿಯು 2020ರ ವಿಶ್ವ ಆಹಾರ ಕಾರ್ಯಕ್ರಮಕ್ಕೆ (ಡಬ್ಲ್ಯುಎಫ್‌ಪಿ) ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಟ್ವೀಟ್ ಮಾಡಿ ಅಧಿಕೃತವಾಗಿ ಘೋಷಿಸಿತು.
ಅಂತಾರಾಷ್ಟ್ರೀಯ ಒಗ್ಗಟ್ಟು ಮತ್ತು ಬಹುಪಕ್ಷೀಯ ಸಹಕಾರದ ಅಗತ್ಯವು ಎಂದಿಗಿಂತಲೂ ಇಂದು ಹೆಚ್ಚು ಸ್ಪಷ್ಟವಾಗಿದೆ. ಹಸಿವನ್ನು ಎದುರಿಸುವ ಪ್ರಯತ್ನಗಳ ಭಾಗವಾಗಿ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಉತ್ತಮ ಪರಿಸ್ಥಿತಿಗಳನ್ನು ಒದಗಿಸಲು ಮತ್ತು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನಾರ್ವೇಜಿಯನ್ ನೊಬೆಲ್ ಸಮಿತಿಯು 2020ರ ವಿಶ್ವ ಆಹಾರ ಕಾರ್ಯಕ್ರಮಕ್ಕೆ (ಡಬ್ಲ್ಯುಎಫ್‌ಪಿ) ಶಾಂತಿ ನೊಬೆಲ್ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಯುದ್ಧ ಮತ್ತು ಸಂಘರ್ಷದ ಆಯುಧವಾಗಿ ಹಸಿವು ಬಳಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ಆಯ್ಕೆ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವ ಆಹಾರ ಕಾರ್ಯಕ್ರಮವು ವಿಶ್ವದ ಅತಿದೊಡ್ಡ ಮಾನವೀಯ ಸಂಘಟನೆಯಾಗಿದ್ದು, ಹಸಿವನ್ನು ಸಮಸ್ಯೆ ಪರಿಹರಿಸುವ ಮತ್ತು ಆಹಾರ ಸುರಕ್ಷತೆಯನ್ನು ಉತ್ತೇಜಿಸುತ್ತದೆ. ತೀವ್ರವಾದ ಆಹಾರ ಅಭದ್ರತೆ ಮತ್ತು ಹಸಿವಿನಿಂದ ಬಳಲುತ್ತಿರುವ 88 ದೇಶಗಳಲ್ಲಿ ಸುಮಾರು 100 ಮಿಲಿಯನ್(10 ಕೋಟಿ) ಜನರಿಗೆ 2019ರಲ್ಲಿ ಡಬ್ಲ್ಯುಎಫ್‌ಪಿ ನೆರವು ನೀಡಿದೆ. 2015ರಲ್ಲಿ ಹಸಿವು ನಿರ್ಮೂಲನೆ ಮಾಡುವುದು ಯುಎನ್‌ನ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾಗಿದೆ. ಈ ಗುರಿಯನ್ನು ಸಾಧಿಸುವ ಯುಎನ್‌ನ ಪ್ರಾಥಮಿಕ ಸಾಧನವಾಗಿದೆ ಎಂದು ಘೋಷಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ನಕಾರಾತ್ಮಕ ತಿರುವು ಪಡೆದುಕೊಂಡಿದೆ. 2019ರಲ್ಲಿ 135 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದರು. ಇದೆಲ್ಲವೂ ಯುದ್ಧ ಮತ್ತು ಸಶಸ್ತ್ರ ಸಂಘರ್ಷದಿಂದ ಉಂಟಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕವು ವಿಶ್ವದ ಹಸಿವಿನಿಂದ ಬಲಿಯಾದವರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆ ಕಾಣುತ್ತಿದೆ.
ಯೆಮೆನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ನೈಜೀರಿಯಾ, ದಕ್ಷಿಣ ಸುಡಾನ್ ಮತ್ತು ಬುರ್ಕಿನಾ ಫಾಸೊ ಮುಂತಾದ ದೇಶಗಳಲ್ಲಿ ಹಿಂಸಾತ್ಮಕ ಸಂಘರ್ಷ ಮತ್ತು ಸಾಂಕ್ರಾಮಿಕ ರೋಗಗಳ ಸಂಯೋಜನೆಯು ಹಸಿವಿನ ಅಂಚಿನಲ್ಲಿ ವಾಸಿಸುವ ಜನರ ಸಂಖ್ಯೆಯಲ್ಲಿ ನಾಟಕೀಯವಾಗಿ ಹೆಚ್ಚಳವಾಗುತ್ತಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶ್ವ ಆಹಾರ ಕಾರ್ಯಕ್ರಮವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತ ಪ್ರಭಾವಶಾಲಿ ಸಾಮರ್ಥ್ಯ ಪ್ರದರ್ಶಿಸಿದೆ. 'ನಮ್ಮಲ್ಲಿ ವೈದ್ಯಕೀಯ ಲಸಿಕೆ ಬರುವವರೆಗೂ ಈಗಿನ ಅವ್ಯವಸ್ಥೆಯ ವಿರುದ್ಧ ಆಹಾರವು ಅತ್ಯುತ್ತಮ ಲಸಿಕೆ'ಯಾಗಿದೆ ಎಂದು ಸಮಿತಿ ವ್ಯಾಖ್ಯಾನಿಸಿದೆ.