ಮಾಸ್ಕೋ, ರಷ್ಯಾ: ನ್ಯಾಟೋ ಪಡೆಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವುದನ್ನು ಮುಂದುವರೆಸಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದು, ಉಕ್ರೇನ್ ಸೈನ್ಯದ ಆಧುನೀಕರಣಕ್ಕೆ ನ್ಯಾಟೋ ಪ್ರಯತ್ನಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ರಷ್ಯಾ-ಫ್ರೆಂಚ್ ಮಾತುಕತೆಗಳ ನಂತರ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ವ್ಲಾಡಿಮಿರ್ ಪುಟಿನ್ ನ್ಯಾಟೋದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಮಿಲಿಟರಿ ತಜ್ಞರನ್ನು ಉಕ್ರೇನ್‌ಗೆ ನ್ಯಾಟೋ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.
ಡೊನ್ಬಾಸ್ನಲ್ಲಿ ಈಗಿರುವ ಸಮಸ್ಯೆಯ ಶಾಂತಿಯುತವಾಗಿ ಇತ್ಯರ್ಥ ಮಾಡಿಕೊಳ್ಳಲು ಉಕ್ರೇನ್ ನಿರಾಕರಿಸಿದೆ. ಮಿನ್ಸ್ಕ್ ಒಪ್ಪಂದದ ನಿಯಮಗಳನ್ನು ಉಕ್ರೇನ್ ಅನುಸರಿಸುತ್ತಿಲ್ಲ. ಈ ಒಪ್ಪಂದಗಳನ್ನು ರದ್ದು ಮಾಡಲು ಉಕ್ರೇನ್ ಮುಂದಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಈ ವಿಚಾರದ ಬಗ್ಗೆ ನಾನು ಮಾತನಾಡಿದ್ದೇನೆ. ಯೂರೋಪ್ ಮತ್ತು ಉಕ್ರೇನ್ನಲ್ಲಿ ಶಾಂತಿ ನೆಲೆಸಲು ಮಾತುಕತೆಗಳನ್ನು ನಡೆಸುವುದಾಗಿ ಅವರು ಹೇಳಿದ್ದಾರೆ ಎಂದು ಪುಟಿನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆ ಭೀತಿ : ಪೋಲ್ಯಾಂಡ್ಗೆ ಬಂದಿಳಿದ ಯುಎಸ್ ಪಡೆಗಳು