ಟೆಲ್ ಅವೀವ್( ಇಸ್ರೇಲ್): ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರಿ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಅಲ್ಲಿನ ಮಾಧ್ಯಮಗಳ ವರದಿಯಂತೆ ಇತ್ತೀಚೆಗೆ ನಡೆದ ಅತಿದೊಡ್ಡ ಸರ್ಕಾರ ವಿರೋಧಿ ಪ್ರತಿಭಟನೆ ಇದಾಗಿದ್ದು, ಸುಮಾರು 10 ಸಾವಿರ ಮಂದಿ ಪಾಲ್ಗೊಂಡಿದ್ದರು.
ಅಧಿಕೃತ ನಿವಾಸ ಮಾತ್ರವಲ್ಲದೇ ಸಿಸೇರಿಯಾ ನಗರದಲ್ಲಿರುವ ನೆತನ್ಯಾಹು ಅವರ ಖಾಸಗಿ ನಿವಾಸದ ಮುಂದೆಯೂ ಕೂಡಾ ಸಾವಿರಾರು ಮಂದಿ ಪಾಲ್ಗೊಂಡು ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು. ಇನ್ನೂ ಕೆಲವೆಡೆ ಸೇತುವೆಗಳು ಹಾಗೂ ಹೆದ್ದಾರಿಗಳಲ್ಲಿ ನೆತನ್ಯಾಹು ವಿರುದ್ಧ ಪ್ರತಿಭಟನೆಗಳು ನಡೆದಿದೆ.
ಪ್ರತಿಭಟನಾಕಾರರ ಕಡೆಗೆ ರಾಕೆಟ್ಗಳನ್ನು ಎಸೆಯುತ್ತಿದ್ದ ನಾಲ್ವರನ್ನು ಪೊಲೀಸರು ಸೆರೆಹಿಡಿದ್ದಾರೆ. ಓರ್ವ ಮಹಿಳೆ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಪೊಲೀಸರು ಯಾವುದೇ ರೀತಿಯ ಹಿಂಸಾಚಾರಗಳನ್ನು , ಸಾರ್ವಜನಿಕ ಸ್ವತ್ತಿಗೆ ಹಾನಿಯಾಗುವುದನ್ನು ಸಹಿಸುವುದಿಲ್ಲ. ಇಂತಹ ಕೃತ್ಯಗಳಿಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಲ್ಲಿನ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸುಮಾರು ವರ್ಷಗಳಿಂದ ನೆತನ್ಯಾಹು ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಪ್ರತಿಭಟನೆಗಳ ಕಾರಣದಿಂದ ತೀವ್ರ ರಾಜಕೀಯ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ.