ಮಾಸ್ಕೋ(ರಷ್ಯಾ): ಉಕ್ರೇನ್ ವಿರುದ್ಧ ಭಯಾನಕ ಸ್ವರೂಪದ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಅಲ್ಲಿನ ಹಾಲಿ ಅಧ್ಯಕ್ಷರಾಗಿರುವ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಉಕ್ರೇನ್ ಮಾಜಿ ಅಧ್ಯಕ್ಷನಿಗೆ ಪಟ್ಟ ಕಟ್ಟಲು ತಯಾರಿ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉಕ್ರೇನ್‌ನ ಈಗಿನ ಅಧ್ಯಕ್ಷ ವೊಲೊಡಿಮಿರ್ ಅವರ ಪದಚ್ಯುತಿಗೆ ಭಾರಿ ಯೋಜನೆ ರೂಪಿಸಿರುವ ರಷ್ಯಾ, ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ಗೆ ಅಧ್ಯಕ್ಷೀಯ ಹೊಣೆ ಹೊರಿಸಲು ಭರ್ಜರಿ ತಯಾರಿ ನಡೆಸಿದ್ದಾಗಿ ಮೂಲಗಳಿಂದ ತಿಳಿದುಬರುತ್ತಿದೆ. ಇದಕ್ಕಾಗಿ ವಾಡ್ಲಿಮಿರ್ ಪುಟಿನ್ ಭಾರಿ ಸಂಚು ರೂಪಿಸಿದ್ದಾರೆ ಎನ್ನಲಾಗಿದ್ದು ನುರಿತ ಶಸ್ತ್ರಸಜ್ಜಿತ ಪಡೆಯನ್ನು ಕೀವ್ಗೆ ರವಾನಿಸಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳ ವರದಿಗಳು ಹೇಳುತ್ತಿವೆ. ಕೀವ್ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಈ ಬಗ್ಗೆ ಮಾಹಿತಿ ಸಹ ನೀಡಿದ್ದಾರೆ.
ವಿಕ್ಟರ್ ಯಾನುಕೋವಿಚ್ ಹಿನ್ನೆಲೆ: 2014ರಲ್ಲಿ ಉಕ್ರೇನ್ನಿಂದ ರಷ್ಯಾಕ್ಕೆ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್, 2010ರಲ್ಲಿ ಉಕ್ರೇನ್‌ನ 4ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಯುರೋಪಿಯನ್ ಒಕ್ಕೂಟದೊಂದಿಗೆ ವ್ಯಾಪಾರ ಒಪ್ಪಂದ ಹಾಗೂ ರಾಜಕೀಯ ಮಾತುಕತೆಗೆ ಸಹಿ ಹಾಕದ ಕಾರಣಕ್ಕೆ ಅವರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕಾಗಿ 2014ರಲ್ಲಿ ಉಕ್ರೇನ್ ಸರ್ಕಾರ ಉರುಳಿಸುವ ಉದ್ದೇಶದಿಂದ ಕೀವ್ನಲ್ಲಿ ಬೃಹತ್ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಅವರು ರಷ್ಯಾಗೆ ಪಲಾಯನ ಮಾಡಿದ್ದರು.