ಲಂಡನ್: 69 ವರ್ಷದ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಯುಕೆ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಆ್ಯಲನ್ ಇಸಿಚೆ(69) ಎಂಬುವರ ಮೇಲೆ ಭಾರತೀಯ ಮೂಲದ ಗುರ್ಜಿತ್ ಸಿಂಗ್ ಲಾಲ್ ಹಲ್ಲೆ ಮಾಡಿ ಕೊಲೆ ಮಾಡಿದ್ದ.
ಸಿಂಗ್(36) ಹಾಗೂ ಇಸಿಚೆ ನಡುವೆ ರಸ್ತೆ ಮೇಲೆ ಎಂಜಲು ಉಗಿದ ಕಾರಣಕ್ಕೆ ವಾಗ್ವಾದ ಏರ್ಪಟ್ಟು, ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದೀಗ ಈ ಪ್ರಕರಣದಲ್ಲಿ ಸಿಂಗ್ ಆರೋಪಿ ಎಂದು ಸಾಬೀತಾಗಿದ್ದು, ಡಿಸೆಂಬರ್ನಲ್ಲಿ ಶಿಕ್ಷೆ ಪ್ರಕಟವಾಗಲಿದೆ.
ಇಸಿಚೆ ಸ್ಥಳೀಯ ಬಾರ್ವೊಂದರಲ್ಲಿ ಮದ್ಯ ಸೇವಿಸಿ ತನ್ನ ಮನೆಗೆ ವಾಪಸಾಗುತ್ತಿದ್ದಾಗ ಇಲ್ಲಿನ ಸೌತ್ಹಾಲ್ ಬಳಿ ಘಟನೆ ನಡೆದಿತ್ತು.
ಈ ಘಟನೆ ಕುರಿತಂತೆ ಅಲ್ಲಿನ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಜಿಮ್ಮಿ ಸ್ಟೀವನ್ಸನ್ ಮಾತನಾಡಿದ್ದು, ಆ ದಿನ ಸಿಂಗ್ ಬಳಿ ಚಾಕು ಇರಲು ಬೇರೆ ಒಳ್ಳೆಯ ಕಾರಣವಿರಲಿಲ್ಲ. ಆತ ಶಿಕ್ಷೆಗೊಳಗಾಗಿದ್ದಕ್ಕೆ ನನಗೆ ತುಂಬಾ ಸಂತೋಷವಿದೆ. ಅಲ್ಲದೆ ತನ್ನ ಆತ್ಮರಕ್ಷಣೆಗಾಗಿ ಚಾಕು ಇಟ್ಟಿದ್ದೆ ಎಂಬ ಆತನ ಹೇಳಿಕೆಯನ್ನು ಕೋರ್ಟ್ ತಿರಸ್ಕರಿಸಿದ್ದಕ್ಕೂ ಸಂತಸವಿದೆ ಎಂದಿದ್ದಾರೆ.