ಬರ್ಲಿನ್: ಜರ್ಮನ್ ಪ್ರಧಾನಿ ಎಂಜೆಲಾ ಮರ್ಕೆಲ್ ಅವರು ತಮಗೆ ಕೋವಿಡ್ ಸೋಂಕು ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಸ (ಕ್ವಾರಂಟೈನ್) ಆರಂಭಿಸಿದ್ದಾರೆ. ಮರ್ಕೆಲ್ ಅವರು ಭೇಟಿಯಾಗಿದ್ದ ವೈದ್ಯರೊಬ್ಬರಿಗೆ ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದ್ದರಿಂದ ಈ ಕ್ರಮಕ್ಕೆ ಮುಂದಾಗಬೇಕಾಗಿದೆ.
ದೇಶದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ದೊಡ್ಡ ಸಮಾರಂಭಗಳನ್ನು ಏರ್ಪಡಿಸುವಂತಿಲ್ಲ ಎಂದು ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ ಮರ್ಕೆಲ್ ಸ್ವತಃ ಕೋವಿಡ್ ಸೋಂಕಿತರಾಗಿರಬಹುದು ಎಂಬ ಶಂಕೆ ಮೂಡುವಂತಾಗಿದೆ.
"ಚಾನ್ಸಲರ್ ಎಂಜೆಲಾ ಮರ್ಕೆಲ್ ಅವರು ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಸ ಆರಂಭಿಸಿದ್ದಾರೆ. ಅವರನ್ನು ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುವುದು. ಅವರು ಮನೆಯಿಂದಲೇ ತಮ್ಮ ಕಚೇರಿಯ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ" ಎಂದು ವಕ್ತಾರ ಸ್ಟೆಫೆನ್ ಸೀಬರ್ಟ್ ತಿಳಿಸಿದ್ದಾರೆ.