ಓಸ್ಲೋ,(ನಾರ್ವೆ) : ನ್ಯಾಟೋ ಸಮರಾಭ್ಯಾಸದಲ್ಲಿ ಭಾಗವಹಿಸುವ ವೇಳೆ ಅಮೆರಿಕದ ಮಿಲಿಟರಿ ವಿಮಾನ ಪತನವಾಗಿ ನಾಲ್ವರು ಅಮೆರಿಕನ್ ಯೋಧರು ಮೃತಪಟ್ಟಿದ್ದಾರೆಂದು ನಾರ್ವೆಯ ಅಧಿಕಾರಿಗಳನ್ನು ಉಲ್ಲೇಖಿಸಿ, ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ರಾತ್ರಿ ನಾರ್ವೇಜಿಯನ್ ಸಮುದ್ರದ ಪರ್ಯಾಯ ದ್ವೀಪದಲ್ಲಿ ಬೋಡೋಗೆ ಹೋಗುವ ಮಾರ್ಗದಲ್ಲಿ ಅಮೆರಿಕ ಮಿಲಿಟರಿ ವಿಮಾನವು ಪತನಗೊಂಡಿದೆ. ವಿಮಾನದಲ್ಲಿ ನಾಲ್ವರೂ ಸಿಬ್ಬಂದಿ ನಾರ್ಡ್‌ಲ್ಯಾಂಡ್ ಕೌಂಟಿಯಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದರು ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ, ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ವಿಮಾನ ಪತನವಾದ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲು ದುಃಖವಾಗುತ್ತಿದೆ ಎಂದು ನಾರ್ವೆಯ ರಕ್ಷಣಾ ಮುಖ್ಯಸ್ಥ ಜನರಲ್ ಎರಿಕ್ ಕ್ರಿಸ್ಟೋಫರ್ಸೆನ್ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ಉಲ್ಲೇಖಿಸಿದೆ. ಇದರ ಜೊತೆಗೆ ನಾರ್ವೇಜಿಯನ್ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳನ್ನು ಯುದ್ಧ ಸಂತ್ರಸ್ತರೆಂದು ಪರಿಗಣಿಸಿ: ಪ್ರಧಾನಿಗೆ ಪತ್ರ
ಅಂದಹಾಗೆ ನಾರ್ವೆಯಲ್ಲಿ 27ಕ್ಕೂ ಹೆಚ್ಚು ನ್ಯಾಟೋ ದೇಶಗಳು ಸಮರಾಭ್ಯಾಸದಲ್ಲಿ ತೊಡಗಿಕೊಂಡಿವೆ. ಈ ಸಮರಾಭ್ಯಾಸದಲ್ಲಿ 30 ಸಾವಿರ ಮಂದಿ ಸೈನಿಕರು ಭಾಗಿಯಾಗಿದ್ದು, ಏಪ್ರಿಲ್ವರೆಗೆ ಸಮರಾಭ್ಯಾಸ ನಡೆಯಲಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.