ಪಾರಿಸ್: "ಎನ್ಫಿನ್ ಲಿಬ್ರೆ!" ಅಂದರೆ ಕೊನೆಗೂ ಸ್ವತಂತ್ರಳು ಎಂದರ್ಥ. ಇಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಕೇವಲ ಒಬ್ಬ ಮಹಿಳೆಗಲ್ಲ, ನ್ಯಾಯಕ್ಕೆ! ಧರ್ಮನಿಂದನೆಯ ಗಂಭೀರ ಆರೋಪ ಹೊರಿಸಿ 2010ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆಸಿಯಾ ಬೀಬಿ, ಪಾಕಿಸ್ಥಾನದ ಕ್ರಿಶ್ಚಿಯನ್ ಮಹಿಳೆ. ಆದರೆ, ವಿಚಿತ್ರ ಎಂಬಂತೆ 2018ರಲ್ಲಿ ಆಕೆಯ ಮೇಲೆ ಧಾರ್ಮಿಕ ಮೂಲಭೂತವಾದಿಗಳು ಹಾಗು ಅಲ್ಲಿನ ಸರ್ಕಾರ ಹೇರಿದ್ದ ಗಲ್ಲು ಶಿಕ್ಷೆ ರದ್ದಾಗಿ ಜೈಲಿನಿಂದ ಆಕೆ ಹೊರ ಬಂದಿದ್ದಳು. ಈ ಮೂಲಕ ನ್ಯಾಯ ಜಯಿಸಿತ್ತು. ಆದ್ರೆ..
ಜೈಲಿನಿಂದ ಹೊರಬಂದ ಆಸಿಯಾ ಮತ್ತೆ ಪಾಕಿಸ್ತಾನದಲ್ಲಿ ನೆಲೆಯೂರದೆ ಕೆನಡಾದಲ್ಲಿ ಜೀವನ ಕಟ್ಟಿಕೊಂಡಿದ್ದರು. ಆಸಿಯಾ ಬೀಬಿಗೆ ಬೆಂಬಲ ಸೂಚಿಸಿ ಅಭಿಯಾನ ನಡೆಸಿದ್ದ ಫ್ರೆಂಚ್ ದೇಶದ ಪತ್ರಕರ್ತೆ ಅನ್ನಿ ಇಸಾಬೆಲ್ಲೆ ಟೋಲೆಟ್, ಆಕೆಯ ಆ ಕಠಿಣ ದಿನಗಳ ಅನುಭವಗಳ ಬಗ್ಗೆ ಪುಸ್ತಕ ಬರೆದಿದ್ದಾರೆ.
"ಎಷ್ಟೋ ಬಾರಿ ನಾನು ಆತ್ಮಸ್ಥೈರ್ಯ ಕಳೆದುಕೊಂಡಿದ್ದೆ. ಜೈಲಿನಿಂದ ಹೊರ ಬರುತ್ತೀನೋ ಇಲ್ಲವೋ? ನನ್ನ ನಂತರದ ಜೀವನ ಹೇಗೋ?ನನ್ನ ಜೀವನ ಈ ಜೈಲಿನೊಳಗೆ ಅಂತ್ಯವಾಗುತ್ತೋ ಎಂಬ ಆತಂಕ ನನ್ನನ್ನು ಹಗಲಿರುಳು ಕಾಡುತ್ತಿತ್ತು. ಆದರೆ, ನ್ಯಾಯ ಕೊನೆಗೂ ಜಯಿಸಿತು" ಎಂದು ಬೀಬಿ ಹೇಳಿಕೊಂಡಿದ್ದಾರೆ.
"ನಾನು ಮತಾಂಧತೆಯ ಖೈದಿಯಾಗಿದ್ದೆ. ಜೈಲಿನಲ್ಲಿ ನನ್ನೊಂದಿಗಿದ್ದಿದ್ದು ಕಣ್ಣೀರು ಮಾತ್ರ" ಎಂದು ಪಾಕಿಸ್ತಾನದ ಜೈಲಿನಲ್ಲಿ ಆಕೆ ಕಳೆದ ಭಯಾನಕ ದಿನಗಳನ್ನು ವಿವರಿಸಿದ್ದಾರೆ.
"ನನ್ನ ಮಣಿಕಟ್ಟುಗಳು ಉರಿಯುತ್ತಿದ್ದವು. ಉಸಿರಾಡಲು ಕಷ್ಟ ಪಡುತ್ತಿದ್ದೆ. ನನ್ನ ಕುತ್ತಿಗೆ ಸುತ್ತ ಕಬ್ಬಿಣದ ಕಾಲರ್ ಸುತ್ತುವರಿಯಲ್ಪಟ್ಟಿತ್ತು. "ಉದ್ದವಾದ ಸರಪಳಿಯು ನೆಲದ ಮೇಲೆ ನನ್ನನ್ನು ಎಳೆಯುತ್ತಿತ್ತು. ಹೀಗೆ ಸರಪಳಿಗಳಲ್ಲಿ ಬಂಧಿಸಿದ್ದ ನನ್ನನ್ನು ಕಾವಲುಗಾರ ನಾಯಿಯಂತೆ ಧರಧರನೆ ಎಳೆಯುತ್ತಿದ್ದ. ಅಲ್ಲೇ ಇದ್ದ ಇತರ ಅನೇಕ ಖೈದಿಗಳು ನನ್ನ ಮೇಲೆ ಕರುಣೆ ತೋರಿಸಲಿಲ್ಲ. ಕೆಲ ಮಹಿಳೆಯರು 'ಗಲ್ಲಿಗೇರಿಸಲಾಗಿದೆ!' ಗಲ್ಲಿಗೇರಿಸಲಾಗಿದೆ! ಎಂದು ಕೂಗು ಹಾಕಿ ನನ್ನನ್ನು ಅಣಕಿಸುತ್ತಿದ್ದಾಗ ನಾನು ಬೆಚ್ಚಿ ಬೀಳುತ್ತಿದ್ದೆ " ಎಂದು ಜೈಲಿನ ಆ ಕರಾಳ ದಿನಗಳನ್ನು ಪುಸ್ತಕದಲ್ಲಿ ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ.
"ಈ ಅಪರಿಚಿತ ದೇಶದಲ್ಲಿ, ನಾನು ಹೊಸ ಜೀವನಕ್ಕೆ ಕಾಲಿಡಲು ಸಿದ್ಧಳಿದ್ದೇನೆ. ಆದರೆ ಯಾವ ಬೆಲೆಗೆ? ನನ್ನ ತಂದೆ ಅಥವಾ ಕುಟುಂಬದ ಇತರ ಸದಸ್ಯರಿಗೆ ವಿದಾಯ ಹೇಳದೆ ನಾನು ಅಲ್ಲಿಂದ ಹೊರಡಬೇಕಾದಾಗ ನನ್ನ ಹೃದಯ ಮುರಿಯಿತು. ಪಾಕಿಸ್ತಾನ ನನ್ನ ದೇಶ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಆದರೆ, ನಾನು ಶಾಶ್ವತವಾಗಿ ದೇಶಭ್ರಷ್ಟಳಾಗಿದ್ದೇನೆ " ಅನ್ನೋದು ಆಕೆಯ ಅಸಹಾಯಕತೆಯ ನೋವಿನ ನುಡಿ!