ಜಿನೀವಾ: ಭಾರತದಲ್ಲಿ ಮೊದಲು ಪತ್ತೆಯಾದ ಬಿ.1.617 ಕೋವಿಡ್-19 ರೂಪಾಂತರ ಈಗ 53 ದೇಶಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಹೇಳಿದೆ.
ಮೇ 25ರಂದು ಡಬ್ಲ್ಯುಹೆಚ್‌ಒ ಪ್ರಕಟಿಸಿದ ಕೋವಿಡ್-19 ವಾರದ ವರದಿಯಲ್ಲಿ, ಕಳೆದೊಂದು ವಾರದಿಂದ ಜಾಗತಿಕವಾಗಿ ಹೊಸ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. 4.1 ದಶಲಕ್ಷಕ್ಕೂ ಹೆಚ್ಚು ಹೊಸ ಕೇಸ್ ಮತ್ತು 84,000 ಹೊಸ ಸಾವುಗಳು ವರದಿಯಾಗಿದ್ದು, ಈ ಪ್ರಮಾಣ ಹಿಂದಿನ ವಾರಕ್ಕಿಂತ ಶೇ. 2ರಷ್ಟು ಕಡಿಮೆಯಿದೆ ಎಂದು ಮಾಹಿತಿ ನೀಡಿದೆ.
ಭಾರತದಲ್ಲಿ ಕಳೆದೊಂದು ವಾರದಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಶೇ. 23ರಷ್ಟು ಇಳಿಕೆಯಾಗಿದೆಯಾದರೂ, ವಿಶ್ವದಲ್ಲೇ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲಿ ಮೊದಲು ಪತ್ತೆಯಾದ ಬಿ.1.617 ಕೊರೊನಾ ವೈರಸ್ ರೂಪಾಂತರವು ಇದೀಗ ಪ್ರಪಂಚದ 53 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಇದೊಂದು ಭೀಕರ ರೂಪಾಂತರವಾಗಿದ್ದು, ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿದೆ. ಇದರ ತೀವ್ರತೆ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದು ಡಬ್ಲ್ಯುಹೆಚ್‌ಒ ತಿಳಿಸಿದೆ.
ಇದನ್ನೂ ಓದಿ: 'ಭಾರತೀಯ ರೂಪಾಂತರಿ' ಕುರಿತ ಪೋಸ್ಟ್ಗಳನ್ನು ತೆಗೆದುಹಾಕಿ: ಸರ್ಕಾರ ಸೂಚನೆ
ಮೇ 22ರಂದು ಭಾರತದ ಸರ್ಕಾರವು, ಕೋವಿಡ್-19 ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯುವ ಸಲುವಾಗಿ 'ಇಂಡಿಯನ್ ವೇರಿಯಂಟ್' (ಭಾರತೀಯ ರೂಪಾಂತರ) ಎಂಬ ಪದವನ್ನು ಬಳಸಿ, ಉಲ್ಲೇಖಿಸುವ ಎಲ್ಲಾ ವಿಷಯಗಳು, ಪೋಸ್ಟ್ಗಳನ್ನು ತಮ್ಮ ಫ್ಲಾರ್ಟ್ಫಾರ್ಮ್ನಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳ ಕಂಪನಿಗಳಿಗೆ ಸೂಚಿಸಿತ್ತು.
ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಯಾವುದೇ ವರದಿಯಲ್ಲಿ ಕೊರೊನಾ ವೈರಸ್‌ನ ಬಿ.1.617 ರೂಪಾಂತರದೊಂದಿಗೆ 'ಇಂಡಿಯನ್ ವೇರಿಯಂಟ್' ಎಂಬ ಪದವನ್ನು ಸಂಯೋಜಿಸಿಲ್ಲ. ಪ್ರಪಂಚದಾದ್ಯಂತ ಭಾರತೀಯ ರೂಪಾಂತರಿ ಕೊರೊನಾ ಹರಡುತ್ತಿದೆ ಎಂದು ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿಗಳು ಪಸರಿಸಲಾಗುತ್ತಿದೆ. ಹೀಗಾಗಿ ಭಾರತೀಯ ರೂಪಾಂತರವನ್ನು ಸೂಚಿಸುವ ಎಲ್ಲಾ ವಿಷಯಗಳನ್ನು ಡಿಲೀಟ್ ಮಾಡಲು ತಿಳಿಸಿ ಎಲ್ಲಾ ಸೋಷಿಯಲ್ ಮೀಡಿಯಾ ಫ್ಲಾರ್ಟ್ಫಾರ್ಮ್ಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪತ್ರ ಬರೆದಿತ್ತು.