ನ್ಯೂ ಸೌತ್ ವೇಲ್ಸ್(ಆಸ್ಟ್ರೇಲಿಯಾ): ಬೆಂಕಿಯ ರೌದ್ರ ನರ್ತನ ಮುಂದುವರೆದ ಪರಿಣಾಮ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಗ್ನಿ ಆವರಿಸಿರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಏಳು ಜನರು ಸಜೀವ ದಹನವಾಗಿದ್ದಾರೆ. ಎನ್ಎಸ್ಡಬ್ಲ್ಯೂ ಗ್ರಾಮೀಣ ಅಗ್ನಿಶಾಮಕ ಸಂಸ್ಥೆಯು ಕರಾವಳಿ ಪಟ್ಟಣವಾದ ಬೇಟ್ಮನ್ಸ್ ಕೊಲ್ಲಿಯಿಂದ ವಿಕ್ಟೋರಿಯಾ ಗಡಿಯವರೆಗೆ ಪ್ರವಾಸಿ ವಲಯವನ್ನು ಸ್ಥಾಪಿಸಿದ್ದು, ಅಲ್ಲಿರುವ ಎಲ್ಲ ಪ್ರವಾಸಿಗರಿಗೆ ಶನಿವಾರದೊಳಗಾಗಿ ಸ್ಥಳಾಂತರವಾಗುವಂತೆ ಸೂಚಿಸಿದೆ.
ಕೆಲ ತಿಂಗಳಿನಿಂದ ಆಸ್ಟ್ರೇಲಿಯಾದ ಕಾಡು ಹೊತ್ತಿ ಉರಿಯುತ್ತಿದೆ. ಜನ ಸಂದಣಿ ಹೆಚ್ಚಿರುವ ಪ್ರದೇಶಗಳಾದ ನ್ಯೂ ಸೌತ್ ವೇಲ್ಸ್, ಕ್ಯಾನ್‌ಬೆರಾ, ಸಿಡ್ನಿ ಸೇರಿ ಅನೇಕ ಪ್ರದೇಶಗಳಿಗೆ ಕಾಡಿನ ಬೆಂಕಿ ಆವರಿಸುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸೇರಿ ಅನೇಕ ಜನರು, ಸಾವಿರಾರು ಮನೆಗಳು, ಪ್ರಾಣಿಗಳು ಬೆಂಕಿಗಾಹುತಿಯಾಗಿವೆ.
ಆಸ್ಟ್ರೇಲಿಯಾದಲ್ಲಿ ಇನ್ನೂ ಬೇಸಿಗೆಯ ಆರಂಭಿಕ ತಿಂಗಳು ಇದಾಗಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಬೆಂಕಿಯ ತೀವ್ರತೆ ಇನ್ನೂ ಮುಂದುವರೆಯಲಿದ್ದು, ಶೀಘ್ರದಲ್ಲೇ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.