ಓಸ್ಲೋ(ನಾರ್ವೆ): ಅಂಗಡಿಗಳಲ್ಲಿದ್ದವರ ಮೇಲೆ ಬಾಣಗಳನ್ನು ಪ್ರಯೋಗಿಸಿದ ವ್ಯಕ್ತಿಯೋರ್ವ ಐವರನ್ನು ಕೊಂದು ಪೊಲೀಸರ ಅತಿಥಿಯಾಗಿರುವ ಘಟನೆ ನಾರ್ವೆಯ ರಾಜಧಾನಿ ಓಸ್ಲೋಗೆ ಸಮೀಪದಲ್ಲಿರುವ ಪುಟ್ಟ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ಅಧಿಕಾರಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವೇಳೆ ಅಧಿಕಾರಿ ರಜೆಯಲ್ಲಿದ್ದು, ಅಂಗಡಿಯೊಳಗಿದ್ದ ಎಂದು ಘಟನೆ ನಡೆದ ಸ್ಥಳವಾದ ಕೋನ್ಸ್ಬರ್ಗ್ನ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈಗ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ನಂತರ ಪೊಲೀಸರು ಆತನನ್ನು ಹಿಡಿಯಲು ಹರಸಾಹಸಪಟ್ಟಿದ್ದಾರೆ. ವ್ಯಕ್ತಿ ದಾಳಿ ನಡೆಸಲು ಕಾರಣವೇನೆಂಬುದು ಇನ್ನೂ ಗೊತ್ತಿಲ್ಲ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಈ ದುಷ್ಕೃತ್ಯದ ಹಿಂದೆ ಯಾರೂ ಇಲ್ಲ ಎಂದು ತಿಳಿದುಬಂದಿದೆ.
ಈಗ ನಾರ್ವೆಯ ಹಂಗಾಮಿ ಪ್ರಧಾನಿಯಾಗಿರುವ ಎರ್ನಾ ಸೋಲ್ಬರ್ಗ್ ಈ ದಾಳಿಯನ್ನು ಭೀಕರ ಎಂದಿದ್ದು, ಪ್ರಧಾನಿಯಾಗಿ ನಿಯೋಜಿತರಾಗಿರುವ ಹಾಗೂ ಗುರುವಾರ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇರುವ ಗಹ್ರ್ ಸ್ಟೋರೆ ಈ ದಾಳಿಯನ್ನು ಅತ್ಯಂತ ಕ್ರೂರ ಎಂದು ನಾರ್ವೆಯ ಸುದ್ದಿ ಸಂಸ್ಥೆ ಎನ್‌ಟಿಬಿಗೆ ಪ್ರತಿಕ್ರಿಯಿಸಿದ್ದಾರೆ.
ಸಂಜೆ 6.15ಕ್ಕೆ ಕೃತ್ಯ ನಡೆದಿದ್ದು, ಕೇವಲ 30 ನಿಮಿಷಗಳ ಅಂತರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕೋನ್ಸ್ಬರ್ಗ್ ಪ್ರದೇಶದಲ್ಲಿ ನಡೆದುಕೊಂಡು ಬಂದ ವ್ಯಕ್ತಿ ಸುಖಾಸುಮ್ಮನೆ ಅಂಗಡಿಗಳ ಮೇಲೆ ಬಾಣಗಳನ್ನು ಹಾರಿಸಿದ್ದಾನೆ. ಆತನನ್ನು ಇನ್ನೂ ವಿಚಾರಣೆ ಮಾಡಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
2011ರಲ್ಲಿ ಇಂಥದ್ದೇ ಘಟನೆ..
ನಾರ್ವೆಯಲ್ಲಿ ಸಮೂಹದ ಮೇಲೆ ದಾಳಿ, ಬಾಂಬ್ ಸ್ಫೋಟದಂಥ ಘಟನೆಗಳು ತುಂಬಾ ಅಪರೂಪ. ಈ ವಿಚಾರದಲ್ಲಿ ನಾರ್ವೆಯ ಇತಿಹಾಸದಲ್ಲಿ ಅತ್ಯಂತ ದುರಂತ ಘಟನೆ ನಡೆದ ದಿನ ಜುಲೈ 22, 2011. ಈ ದಿನ ಬಲಪಂಥೀಯ ಉಗ್ರ ಆಂಡ್ರೇಸ್ ಬ್ರೆವಿಕ್ ಓಸ್ಲೋದಲ್ಲಿ ಬಾಂಬ್ ದಾಳಿ ಮಾಡಿ 8 ಮಂದಿಯನ್ನು ಕೊಂದಿದ್ದನು. ನಂತರ ಉಯೋಟಾ ದ್ವೀಪಕ್ಕೆ ತೆರಳಿ ಅಲ್ಲಿ ಲೇಬರ್ ಪಾರ್ಟಿಯ ಯೂಥ್ ವಿಂಗ್ ಮೇಲೆ ಬಾಂಬ್ ದಾಳಿ ನಡೆಸಿ 69 ಮಂದಿಯನ್ನು ಕೊಂದಿದ್ದನು.
ಇದಾದ ನಂತರ ಆತನನ್ನು ಬಂಧಿಸಿದ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದರು. ಅಲ್ಲಿನ ಕೋರ್ಟ್ ಆಂಡ್ರೇಸ್ ಬ್ರೆವಿಕ್ಗೆ 21 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ನೀಡಿದೆ. ನಾರ್ವೆಯ ಕಾನೂನು ಪ್ರಕಾರ ಓರ್ವ ಅಪರಾಧಿಗೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಯ ಪ್ರಮಾಣ 21 ವರ್ಷಗಳ ಕಾರಾಗೃಹ ಶಿಕ್ಷೆ ಮಾತ್ರ. ಹೀಗಾಗಿ ಆತನಿಗೆ ಜೀವಾವಧಿ ಅಥವಾ ಮರಣದಂಡನೆಯಂಥ ಶಿಕ್ಷೆ ನೀಡಿಲ್ಲ. ಸಮಾಜಕ್ಕೆ ಮಾರಕ ಎಂಬ ಕಾರಣಕ್ಕೆ ಮತ್ತೊಮ್ಮೆ ಈತನ ಕಾರಾಗೃಹ ವಾಸವನ್ನು ವಿಸ್ತರಿಸುವ ಅಧಿಕಾರವೂ ಸರ್ಕಾರಕ್ಕಿದೆ.
ಇದನ್ನೂ ಓದಿ: ಪರಮಾಣು ತಡೆ ಒಪ್ಪಂದ AUKUS ಒಕ್ಕೂಟದಿಂದ ವ್ಯರ್ಥ: ಚೀನಾ ಟೀಕೆ