ಮೊಗಾಡಿಶು: ಸೊಮಾಲಿಯಾದ ರಾಜಧಾನಿ ಮೊಗಾಡಿಶುನಲ್ಲಿರುವ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಭಾನುವಾರ ಸಂಜೆ ಸ್ಫೋಟಕ ತುಂಬಿದ ವಾಹನವನ್ನು ಮೊಗಾಡಿಶುನ ವಾಬೆರಿ ಜಿಲ್ಲಾ ಪೊಲೀಸ್ ಠಾಣೆಯೆಡೆ ಓಡಿಸಲಾಗಿದೆ ಎಂದು ಸೊಮಾಲಿ ನ್ಯಾಷನಲ್ ಟೆಲಿವಿಷನ್ ವರದಿ ಮಾಡಿದೆ. ದಾಳಿಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ಸಂಘಟನೆ ಈವರೆಗೆ ಕೃತ್ಯದ ಹೊಣೆ ಹೊತ್ತಿಲ್ಲ.
ಇದನ್ನೂ ಓದಿ: ಕಾಬೂಲ್ ಶಾಲೆ ಬಳಿ ಸ್ಫೋಟ: ಸಾವಿನ ಸಂಖ್ಯೆ 53ಕ್ಕೆ ಏರಿಕೆ
ಘಟನೆಯನ್ನು ಸೊಮಾಲಿಯಾ ಪ್ರಧಾನಿ ಮೊಹಮ್ಮದ್ ಹುಸೇನ್ ರೋಬಲ್ ತೀವ್ರವಾಗಿ ಖಂಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. 2020ರ ನವೆಂಬರ್ನಲ್ಲಿ ಕೂಡ ಮೊಗಾಡಿಶು ಪೊಲೀಸ್ ಅಕಾಡೆಮಿ ಬಳಿ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಮೃತಪಟ್ಟಿದ್ದರು.