ಮರಿಉಪೊಲ್ (ಉಕ್ರೇನ್): ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮತ್ತಷ್ಟು ಭೀಕರ ದಾಳಿ ನಡೆಸುತ್ತಿದೆ. ಭಾನುವಾರ ಸೇನಾ ನೆಲೆಯ ಮೇಲೆ ರಷ್ಯಾದ ವಾಯುಪಡೆ ಮಾಡಿದ ದಾಳಿಯಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, ಸುಮಾರು 134 ಜನರು ರಷ್ಯಾ ದಾಳಿಯಿಂದ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೋಲೆಂಡ್‌ನ ಗಡಿ ಸಮೀಪದ ಸೇನಾ ನೆಲೆಯಲ್ಲಿ ಉಕ್ರೇನ್ ಪಡೆಗಳು ನ್ಯಾಟೊ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದವು. ಈ ಸೇನಾ ನೆಲೆ ಮೇಲೆ ರಷ್ಯಾದ ವಾಯು ಪಡೆಯು ವೈಮಾನಿಕ ದಾಳಿ ನಡೆಸಿದೆ ಎಂದು ಉಕ್ರೇನ್ ಹೇಳಿದೆ.
ಈಗ ದಾಳಿ ನಡೆದಿರುವ ಸೇನಾ ನೆಲೆಯು ಪೋಲೆಂಡ್ ಗಡಿ ಭಾಗದಿಂದ ಕೇವಲ 25 ಕಿ.ಮೀ. ದೂರದಲ್ಲಿದೆ. ವಾಯುವ್ಯ ಎಲ್ವಿವ್ನಲ್ಲಿರುವ ಶಾಂತಿಪಾಲನೆ ಮತ್ತು ಭದ್ರತೆಗಾಗಿ ಅಂತಾರಾಷ್ಟ್ರೀಯ ಕೇಂದ್ರವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. 30ಕ್ಕೂ ಹೆಚ್ಚು ಕ್ಷಿಪಣಿಗಳ ಮೂಲಕ ದಾಳಿ ಮಾಡಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ, ಇದೇ ಯುದ್ಧ ಪೀಡಿತ ಉಕ್ರೇನ್ನಲ್ಲಿ ಅಮೆರಿಕದ ಪತ್ರಕರ್ತರೊಬ್ಬರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಬ್ರೆಂಟ್ ರೆನೌಡ್ ಕೊಲೆಯಾದ ಪತ್ರಕರ್ತ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಉಕ್ರೇನ್ನಿಂದ ತಾತ್ಕಾಲಿಕವಾಗಿ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ