ಬ್ಯಾಂಕಾಕ್: ನೆರೆಯ ರಾಷ್ಟ್ರಗಳ ವಿರುದ್ಧ ಗಡಿ ವಿಚಾರದಲ್ಲಿ ಸದಾ ತಕರಾರು ತೆಗೆಯುವ ಚೀನಾಗೆ ಭಾರಿ ಮುಖಭಂಗವಾಗಿದೆ. ಡ್ರ್ಯಾಗನ್ ದೇಶದಿಂದ ಎರಡು ಸಬ್‌ಮರೀನ್‌ಗಳನ್ನು ಖರೀದಿಸುವ ಪ್ರಸ್ತಾಪವನ್ನು ಮುಂದೂಡಿದ್ದ ಥಾಯ್ಲೆಂಡ್, ಇದೀಗ ಬೇ ಆಫ್ ಬೆಂಗಾಲ್‌ನಲ್ಲಿ ಕಾಲುವೆ ನಿರ್ಮಿಸಲು ಚೀನಾಗೆ ನೀಡಿದ್ದ ಯೋಜನೆಯನ್ನು ಸ್ಥಗಿತಗೊಳಿಸಿದೆ. ಸ್ವತಃ ತಾವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
2015ರ ಒಪ್ಪಂದದ ಪ್ರಕಾರ ಚೀನಾದಿಂದ ನೌಕೆಯನ್ನು ಖರೀದಿಸುವ ದೇಶಗಳ ಪೈಕಿ ಥಾಯ್ಲೆಂಡ್ ಮೊದಲ ದೇಶವಾಗಿತ್ತು. 2017ರಲ್ಲಿ ಮೂರು ಸಬ್‌ಮರೀನ್‌ಗಳನ್ನು ಖರೀದಿಸಲು ಅಂತಿಮವಾಗಿ ಮಾತುಕತೆ ನಡೆದಿತ್ತು. 2023ರಕ್ಕೆ ಮೊದಲ ಜಲಾಂತರ್ಗಾಮಿ ನೌಕೆಯನ್ನು ಪೂರೈಕೆ ಮಾಡುವ ಅಂದಾಜಿತ್ತು.
ಸದ್ಯ ಆರ್ಥಿಕ ಪರಿಸ್ಥಿತಿಯಿಂದಾಗಿ 724 ಮಿಲಿಯನ್ ಯುಎಸ್ ಡಾಲರ್ ನೀಡಿ ಚೀನಾದಿಂದ 2 ಸಬ್‌ಮರೀನ್‌ಗಳನ್ನು ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಂಡಿದೆ. ಜೊತೆಗೆ ಬೇ ಆಫ್ ಬೆಂಗಾಲ್‌ನಲ್ಲಿ ಕಾಲುವೆ ನಿರ್ಮಿಸುವ ಯೋಜನೆಯನ್ನು ಕ್ಸಿ ಜಿಂಗ್ ಪಿಂಗ್ ಸರ್ಕಾರಕ್ಕೆ ನೀಡದೆ ತಾವೇ ನಿರ್ಮಿಸಿಕೊಳ್ಳುವ ನಿರ್ಧಾರವನ್ನು ಕೈಗೊಂಡಿದೆ. ನೌಕೆಯ ಬೆಲೆಯಲ್ಲಿ ಏರಿಳಿತವಾಗಿದೆ. ಚೀನಾ ಬೇಕಂತಲೇ ಯೋಜನೆಯನ್ನು ಮತ್ತೊಂದು ವರ್ಷಕ್ಕೆ ತಡ ಮಾಡುತ್ತಿದೆ ಎಂದು ಥಾಯ್ಲೆಂಡ್ ಸರ್ಕಾರದ ವಕ್ತಾರ ಅನುಚ ಬುರಪಾಚೈಶ್ರಿ ತಿಳಿಸಿದ್ದಾರೆ. ದೇಶದ ಜನತೆ ಆರ್ಥಿಕತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೊದಲ ಸಾರ್ವಜನಿಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಧಾನಿ ಪ್ರಯೂತ್ ಚಾನ್ ಒ ಚಾ ಹೇಳಿದ್ದಾರೆ.