ಕಾಬೂಲ್(ಅಫ್ಘಾನಿಸ್ತಾನ): ನಮ್ಮ ವಿಮಾನಗಳನ್ನು ನಮಗೆ ಕೊಟ್ಟುಬಿಡಿ ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ ಎಂದು ಉಜ್ಭೇಕಿಸ್ತಾನ ಮತ್ತು ತಜಿಕಿಸ್ತಾನಕ್ಕೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ.
ಕಾಬೂಲ್‌ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಾಯುಪಡೆಯು ಸಮರಾಭ್ಯಾಸ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಹಂಗಾಮಿ ರಕ್ಷಣಾ ಸಚಿವ ಮುಜಾಹಿದ್, ತಜಿಕಿಸ್ತಾನ್ ಅಥವಾ ಉಜ್ಬೇಕಿಸ್ತಾನಕ್ಕೆ ಕೊಂಡೊಯ್ಯಲಾದ ಮಿಲಿಟರಿ ವಿಮಾನಗಳನ್ನು ಕೂಡಲೇ ಹಿಂತಿರುಗಿಸಬೇಕು, ಇಲ್ಲವಾದಲ್ಲಿ ಆ ರಾಷ್ಟ್ರಗಳು ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರ ಉರುಳಿದ ನಂತರ ಕೆಲವು ಮಿಲಿಟರಿ ವಿಮಾನಗಳನ್ನು ತಜಿಕಿಸ್ತಾನ ಮತ್ತು ಉಜ್ಭೇಕಿಸ್ತಾನಕ್ಕೆ ಕೊಂಡೊಯ್ಯಲಾಗಿತ್ತು. ಆ ವಿಮಾನಗಳನ್ನು ಆ ದೇಶಗಳಲ್ಲೇ ಉಳಿಯಲು ಅಥವಾ ಆ ದೇಶಗಳು ಬಳಸಲು ನಾವು ಅನುಮತಿ ನೀಡುವುದಿಲ್ಲ. ನಮ್ಮ ಭವಿಷ್ಯದ ವಾಯುಪಡೆ ಯಾವುದೇ ದೇಶವನ್ನು ಅವಲಂಬಿಸಿರುವುದಿಲ್ಲ ಎಂದು ರಕ್ಷಣಾ ಸಚಿವ ಮುಜಾಹಿದ್ ಹೇಳಿಕೆ ನೀಡಿದ್ದಾರೆ.
ಹಿಂದಿನ ಸರ್ಕಾರ ಪತನವಾದ ನಂತರ 40 ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನ್‌ಗೆ ಸಾಗಿಸಲಾಗಿದೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯ ಈ ಹಿಂದೆ ಮಾಹಿತಿ ನೀಡಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ನಿಷ್ಕ್ರಿಯವಾಗಿದ್ದ ಹಲವಾರು ರಷ್ಯಾ ನಿರ್ಮಿತ ಹೆಲಿಕಾಪ್ಟರ್‌ಗಳನ್ನು ಇಸ್ಲಾಮಿಕ್ ಎಮಿರೇಟ್‌ನಿಂದ ದುರಸ್ತಿ ಮಾಡಿಸಿದ ನಂತರ ಮಂಗಳವಾರ ಪ್ರದರ್ಶನ ಮಾಡಲಾಗಿದೆ.
ವರದಿಗಳ ಪ್ರಕಾರ, ಪ್ರಜಾಪ್ರಭುತ್ವ ಸರ್ಕಾರ ಪತನಗೊಳ್ಳುವ ಮೊದಲು ಅಫ್ಘಾನಿಸ್ತಾನವು 164ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳನ್ನು ಹೊಂದಿತ್ತು. ಆದರೆ ಈಗ ದೇಶದಲ್ಲಿ ಕೇವಲ 81 ವಿಮಾನಗಳಿವೆ. ಉಳಿದ ವಿಮಾನಗಳನ್ನು ಅಫ್ಘಾನಿಸ್ತಾನದಿಂದ ಹೊರಗೆ ಸಾಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಮೆರಿಕದ ಅಲಾಸ್ಕಾ ದ್ವೀಪದಲ್ಲಿ ಭಾರಿ ಭೂಕಂಪ..6.8 ರಷ್ಟು ತೀವ್ರತೆ ದಾಖಲು