ಕಾಬೂಲ್ (ಅಫ್ಘಾನಿಸ್ತಾನ): ಈ ಹಿಂದೆ ಆತ್ಮಾಹುತಿ ದಾಳಿಕೋರರನ್ನು 'ಹುತಾತ್ಮರು' ಎಂದು ಕರೆದಿದ್ದ ತಾಲಿಬಾನ್ ಸರ್ಕಾರ ಇದೀಗ ಅಫ್ಘಾನಿಸ್ತಾನದ ಸೇನೆಗೆ ಸೂಸೈಡ್ ಬಾಂಬರ್ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ಆತ್ಮಾಹುತಿ ದಾಳಿಕೋರರ ವಿಶೇಷ ಬೆಟಾಲಿಯನ್ ಭವಿಷ್ಯದಲ್ಲಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ ಸೇನೆಯ ಭಾಗವಾಗಲಿದೆ ಮತ್ತು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಸಕ್ರಿಯವಾಗಿರುತ್ತದೆ ಎಂದು ತಾಲಿಬಾನ್ ವಕ್ತಾರ ಹಾಗೂ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಉಪ ಸಚಿವ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.
ಅಗತ್ಯದ ಆಧಾರದ ಮೇಲೆ ಮಹಿಳೆಯರನ್ನು ಸಹ ಸೇನೆಗೆ ನೇಮಕ ಮಾಡಿಕೊಳ್ಳಲಾಗುವುದು. ಅಷ್ಟೇ ಅಲ್ಲ, ಹಿಂದಿನ ಅಫ್ಘನ್ ಸೈನ್ಯದ ತಜ್ಞರು ಕೂಡ ಮುಂದಿನ ಸೇನೆಯಲ್ಲಿರಲಿದ್ದಾರೆ ಎಂದು ಇದೇ ವೇಳೆ ಮುಜಾಹಿದ್ ತಿಳಿಸಿದ್ದಾರೆ.
ಇದನ್ನೂ ಓದಿ: ತಾಲಿಬಾನಿಗಳ ಕಪಿಮುಷ್ಟಿಯಲ್ಲಿ ಅಫ್ಘಾನ್ ಪ್ರಜೆಗಳು.. ಹಸಿವಿನ ಹಾಹಾಕಾರ ತೆರೆದಿಡುವ ಫೋಟೋಗಳು
ಈಗಾಗಲೇ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನವು ಆತ್ಮಾಹುತಿ ದಾಳಿಕೋರರನ್ನು ತಜಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಉತ್ತರದ ಗಡಿಭಾಗದಲ್ಲಿ ನಿಯೋಜಿಸಿದೆ ಎಂದು ವರದಿಯಾಗಿದೆ ಆದರೆ ಸುದ್ದಿ ಅಧಿಕೃತವಾಗಿ ಖಚಿತವಾಗಿಲ್ಲ ಎಂದು ಖಾಮಾ ನ್ಯೂಸ್ ವರದಿ ಮಾಡಿದೆ.
ಕಳೆದ ಆಗಸ್ಟ್ನಲ್ಲಿ ಸಂಪೂರ್ಣ ಅಫ್ಘಾನಿಸ್ತಾನವನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಂಡ ತಾಲಿಬಾನ್ ಉಗ್ರ ಸಂಘಟನೆ ನೂತನ ಸರ್ಕಾರವನ್ನು ರಚಿಸಿದೆ. ಇದೊಂದೇ ಸಚಿವಾಲಯಗಳಿಗೆ ಸದಸ್ಯರನ್ನು ನೇಮಿಸುತ್ತಿದೆ. ಈ ಹಿಂದೆ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವು 1,00,000 ಸದಸ್ಯರ ನೂತನ ರಕ್ಷಣಾ ಪಡೆಯನ್ನು ರಚಿಸುವುದಾಗಿ ಹೇಳಿತ್ತು.