ಕಾಬೂಲ್(ಅಫ್ಘಾನಿಸ್ತಾನ): ಅಧಿಕಾರ ಸಿಕ್ಕ ನಂತರವೂ ಕುಕೃತ್ಯಗಳಲ್ಲೇ ನಿರತರಾಗಿರುವ ತಾಲಿಬಾನ್ ಮತ್ತೊಂದು ವಿಧ್ವಂಸಕಾರಿ ಯೋಜನೆಗೆ ಕೈ ಹಾಕಿದೆ.
ತಾಲಿಬಾನ್ ಇದೀಗ ಆತ್ಮಾಹುತಿ ಬಾಂಬರ್ಗಳ ವಿಶೇಷ ಬೆಟಾಲಿಯನ್ ರಚನೆ ಮಾಡಿದೆ. ಆ ಬೆಟಾಲಿಯನ್ ಅನ್ನು ಅಫ್ಘಾನಿಸ್ತಾನದ ಗಡಿಗಳಲ್ಲಿ ಅದರಲ್ಲೂ ವಿಶೇಷವಾಗಿ ಬಡಕ್ಷಾನ್ ಪ್ರಾಂತ್ಯದಲ್ಲಿ ನಿಯೋಜಿಸಲಾಗುತ್ತದೆ ಎಂದು ಅದೇ ಪ್ರಾಂತ್ಯದ ಉಪ ರಾಜ್ಯಪಾಲ ಮುಲ್ಲಾ ನಿಸಾರ್ ಅಹ್ಮದ್ ಅಹ್ಮದಿ ತಿಳಿಸಿದ್ದಾನೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಬಡಾಕ್ಷನ್ ಪ್ರಾಂತ್ಯ ಅಫ್ಘಾನಿಸ್ತಾನದ ಈಶಾನ್ಯ ದಿಕ್ಕಿನಲ್ಲಿದೆ. ಇದು ಚೀನಾ ಮತ್ತು ತಜಕಿಸ್ತಾನಗಳೊಂದಿಗೆ ಗಡಿ ಹಂಚಿಕೊಳ್ಳುತ್ತದೆ. ಇದೇ ಗಡಿಗಳಲ್ಲಿ ಈ ವಿಶೇಷ ಬೆಟಾಲಿಯನ್ ಅನ್ನು ನಿಯೋಜಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೂಸೈಡ್ ಬಾಂಬರ್ಗಳ ಈ ಬೆಟಾಲಿಯನ್ಗೆ ಲಷ್ಕರ್-ಎ-ಮನ್ಸೂರಿ ಅಥವಾ ಮನ್ಸೂರ್ ಸೇನೆ ಎಂದು ಹೆಸರಿಡಲಾಗಿದೆ. ದೇಶದ ಇತರ ಗಡಿಗಳಲ್ಲೂ ಈ ಸೇನೆಯನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಅಹ್ಮದಿ ತಿಳಿಸಿದ್ದಾನೆ.
'ಅಲ್ಲಾಹ್ಗಾಗಿ ತಮ್ಮನ್ನು ಅರ್ಪಿಸಿಕೊಳ್ತಾರೆ'
ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದ್ದಾಗ ಅವರನ್ನು ಗುರಿಯಾಗಿಸಿಕೊಂಡು ಇದೇ ಮನ್ಸೂರ್ ಸೇನೆಯ ಉಗ್ರರು ದಾಳಿ ನಡೆಸುತ್ತಿದ್ದರು. ಈ ಬೆಟಾಲಿಯನ್ ಇದ್ದ ಕಾರಣದಿಂದಲೇ ಅಮೆರಿಕ ದೇಶದಿಂದ ಪಲಾಯನ ಮಾಡಬೇಕಾಗಿ ಬಂದಿತು ಎಂದು ಅಹ್ಮದಿ ಹೇಳುತ್ತಾನೆ.
'ಧೈರ್ಯಶಾಲಿ' ಸೈನಿಕರಿರುವ ಈ ಬೆಟಾಲಿಯನ್ ಸ್ಫೋಟಕ ಹೊಂದಿರುವ ಕೋಟುಗಳನ್ನು ಧರಿಸುತ್ತಾರೆ. ಅವರು ಯಾವುದೇ ಭಯವಿಲ್ಲದೇ ಅಲ್ಲಾಹ್ಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ: ಇದು ಸೂರ್ಯನ ಸಮೀಪದ ಬುಧ ಗ್ರಹ: ಉಡ್ಡಯನದ 3 ವರ್ಷಗಳ ಬಳಿಕ ಬಾಹ್ಯಾಕಾಶ ನೌಕೆ ಕಳುಹಿಸಿದ ಚಿತ್ರ