ಕಾಬೂಲ್ (ಅಫ್ಘಾನಿಸ್ತಾನ): ಮಹಿಳೆಯರಿಗೆ ರಕ್ಷಣೆ, ತಮ್ಮ ಸರ್ಕಾರದಲ್ಲಿ ಹುದ್ದೆ ನೀಡುವ ಭರವಸೆ ನೀಡಿದ್ದ ತಾಲಿಬಾನ್ ಸಂಘಟನೆ ಇದೀಗ ಹೆಜ್ಜೆ ಹೆಜ್ಜೆಗೂ ಮಹಿಳೆಯರು ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಬದುಕು ಸಾಗಿಸುವ ಪರಿಸ್ಥಿತಿ ಸೃಷ್ಟಿಸಿದೆ.
ಈ ಹಿಂದೆ ಜೈಲು ಪಾಲಾಗಿದ್ದ ತಾಲಿಬಾನ್ ಖೈದಿಗಳನ್ನು ಉಗ್ರ ಸಂಘಟನೆ ಇದೀಗ ಬಿಡುಗಡೆ ಮಾಡಿದ್ದು, ಅವರನ್ನು ಜೈಲಿಗಟ್ಟಿದ್ದ ಅಫ್ಘಾನಿಸ್ತಾನದ 250 ಮಹಿಳಾ ನ್ಯಾಯಾಧೀಶರು ಜೀವಭಯದಲ್ಲಿದ್ದಾರೆ. ಮಹಿಳಾ ನ್ಯಾಯಾಧೀಶರ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಸೆರೆಮನೆಯಿಂದ ರಿಲೀಸ್ ಮಾಡಲಾಗಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ನಮಗಿದೆ: ತಾಲಿಬಾನ್ ಯೂ ಟರ್ನ್
ಈಗಾಗಲೇ ಕೆಲ ನ್ಯಾಯಾಧೀಶೆಯರು ತಾಲಿಬಾನ್ ಸ್ವಾಧೀನದಲ್ಲಿರುವ ದೇಶ ತೊರೆದು ಪಲಾಯನವಾಗಿದ್ದು, ಅನೇಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರಾರಿಯಾಗಲು ಯತ್ನಿಸುತ್ತಿದ್ದಾರೆ. ಕಳೆದ ಜನವರಿಯಲ್ಲಿ ಇಬ್ಬರು ಸುಪ್ರೀಂಕೋರ್ಟ್ ನ್ಯಾಯಧೀಶೆಯರನ್ನು ತಾಲಿಬಾನ್ ಉಗ್ರರು ಗುಂಡಿಕ್ಕಿ ಕೊಂದಿದ್ದರು.
ದೇಶಾದ್ಯಂತ ವಿವಿಧ ಜೈಲುಗಳಿಂದ ಬಿಡುಗಡೆಯಾದ ತಾಲಿಬಾನಿಗಳು ನನ್ನ ಮನೆಗೆ ನುಗ್ಗಿ 'ನನ್ನನ್ನು ಜೈಲಿಗಟ್ಟಿದ್ದ ಆ ಮಹಿಳಾ ನ್ಯಾಯಾಧೀಶೆ ಎಲ್ಲಿ?' ಎಂದು ಹುಡುಕಾಡಿದ್ದಾರೆ. ನನ್ನ ಸಹದ್ಯೋಗಿಗಳು ಈಗ ಅಪಾಯದಲ್ಲಿ ಸಿಲುಕಿದ್ದಾರೆ ಎಂದು ಪಲಾಯನವಾಗಿರುವ ನ್ಯಾಯಾಧೀಶೆಯೊಬ್ಬರು ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.