ಎನ್ಗನ್ಜುಕ್ (ಇಂಡೋನೇಷ್ಯಾ) : ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ. ತುರ್ತು ಕಾರ್ಯಾಚರಣೆ ಸಿಬ್ಬಂದಿ ನಾಪತ್ತೆಯಾದವರ ಪತ್ತೆಗಾಗಿ ಮಣ್ಣು ಅಗೆದು ಹುಡುಕಾಟ ನಡೆಸಿದ್ದು, ಯಾವುದೇ ಫಲ ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.
ಪೂರ್ವ ಜಾವಾದ ಎನ್ಗನ್ಜುಕ್ ಜಿಲ್ಲೆಯ ಸೆಲೋಪುರೊ ಗ್ರಾಮದಲ್ಲಿ ನಾಪತ್ತೆಯಾದವರ ಹುಡುಕಾಟದಲ್ಲಿ ಸೈನಿಕರು, ಪೊಲೀಸರು ಮತ್ತು ಸ್ವಯಂಸೇವಕರು ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಏಜೆನ್ಸಿ ವಕ್ತಾರ ರಾಡಿತ್ಯ ಜತಿ ತಿಳಿಸಿದ್ದಾರೆ.
ಓದಿ : ಇಂದೂ ಬಿಡುಗಡೆಯಾಗಲ್ಲ ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂಕಿ
ಸುತ್ತಮುತ್ತಲಿನ ಬೆಟ್ಟಗಳಿಂದ ಮಣ್ಣು ಕುಸಿತದ ಪರಿಣಾಮ 8 ಮನೆಗಳಿಗೆ ಹಾನಿಯಾಗಿದೆ. 21 ಜನರು ಭಾರೀ ಪ್ರಮಾಣದ ಮಣ್ಣಿನಡಿ ಸಿಲುಕಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ಸಿಬ್ಬಂದಿ ಎರಡು ಶವಗಳನ್ನು ಪತ್ತೆ ಹಚ್ಚಿದ್ದು, ಗಾಯಗೊಂಡ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಜತಿ ಹೇಳಿದ್ದಾರೆ. ಕಾಣೆಯಾದ 16 ಮಂದಿಗಾಗಿ ಹುಡುಕಾಟ ಮುಂದುವರೆದಿದೆ.