ಮಾಸ್ಕೋ: ರಷ್ಯಾದಲ್ಲಿ 114 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಸೋಮವಾರದಿಂದ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ಮಹಾಮಾರಿ ಕೊರೊನಾ ಭೀತಿಯಿಂದ ಇಂದಿನಿಂದ ದೇಶಕ್ಕೆ ವಿದೇಶಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸಲಾಗಿದೆ. ದೇಶದಲ್ಲಿ ಈಗಾಗಲೇ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಜನರು ಆತಂಕಪಡುವ ಆಗತ್ಯವಿಲ್ಲ ಎಂದು ಹೇಳಿದ್ದಾರೆ.
ಮಾರಕ ವೈರಸ್ ಬಗ್ಗೆ ನಿಖರವಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸಾರ್ವಜನಿಕರು ಸ್ವಯಂ ಜಾಗರೂಕತೆಯಿಂದ ಕಾಳಜಿ ವಹಿಸಬೇಕು ಎಂದು ಕ್ಯಾಬಿನೆಟ್ ಸಭೆಯಲ್ಲಿ ಪುಟಿನ್ ಮನವಿ ಮಾಡಿದರು.
ದೇಶದ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳಲು ಮತ್ತು ಕಡ್ಡಾಯವಾಗಿ ಕೈ ತೊಳೆಯುವ ವ್ಯವಸ್ಥೆ ಮಾಡಲಾಗಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟ ಕೆಲಸಗಾರರು ಮನೆಗೆ ಹೋಗುವಂತೆ ಕೈಗಾರಿಕಾ ಸಚಿವಾಲಯ ಶಿಫಾರಸು ಮಾಡಿದೆ.
ಉಪ ಪ್ರಧಾನ ಮಂತ್ರಿ ಟಟಯಾನಾ ಗೋಲಿಕೋವಾ ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಹಿನ್ನೆಲೆ 1,10,000 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ. ನಾವು ದಿನಕ್ಕೆ 1,00,000 ಪರೀಕ್ಷಾ ಕಿಟ್‌ಗಳನ್ನು ಉತ್ಪಾದಿಸುತ್ತಿದ್ದೇವೆ. ಚಿಕಿತ್ಸೆಯನ್ನು ಚುರುಕುಗೊಳಿಸಲಾಗಿದ್ದು, ಪ್ರಾದೇಶಿಕ ಪಟ್ಟದಲ್ಲಿ ಸಹ ಉತ್ತಮ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ನಡುವೆಯೇ ಸೈಬೀರಿಯಾದ ಸಂಶೋಧನಾ ಸಂಸ್ಥೆ ಪ್ರಾಣಿಗಳ ಮೇಲೆ ಲಸಿಕೆಯ ಮೂಲ ಮಾದರಿಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ಪ್ರಯೋಗಾಲಯದ ಮುಖ್ಯಸ್ಥರು ಸೋಮವಾರ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.