ಬೀಜಿಂಗ್(ಚೀನಾ): ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ತೀವ್ರ ಅನಾರೋಗ್ಯದ ಕಾರಣ ನಿನ್ನೆ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಗಲಿಕೆಗೆ ದೇಶ ಮಾತ್ರವಲ್ಲದೇ ವಿದೇಶದ ಮುಖಂಡರೂ ಸಂತಾಪ ಸೂಚಿಸಿದ್ದಾರೆ.
ತೀವ್ರ ಅನಾರೋಗ್ಯದ ಕಾರಣ 21 ದಿನಗಳ ಆಸ್ಪತ್ರೆಯಲ್ಲಿ ಹೋರಾಟ ನಡೆಸಿ ನಿನ್ನೆ ಸಂಜೆ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಈಗಾಗಲೇ ಯುಎಸ್, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ, ನೇಪಾಳ ಸೇರಿದಂತೆ ಅನೇಕ ದೇಶಗಳು ಸಂತಾಪ ಸೂಚಿಸಿದ್ದು, ಇದೀಗ ಚೀನಾ ಕೂಡ ಕಂಬನಿ ಮಿಡಿದಿದೆ.
ಇದನ್ನು ಓದಿ: ಬಾಂಗ್ಲಾದೇಶವು ನಿಜವಾದ ಸ್ನೇಹಿತನನ್ನು ಕಳೆದುಕೊಂಡಿದೆ: ಪ್ರಣಬ್ ನಿಧನಕ್ಕೆ ಶೇಖ್ ಹಸೀನಾ ಸಂತಾಪ
50 ವರ್ಷಗಳ ರಾಜಕೀಯ ಜೀವನದಲ್ಲಿ ಚೀನಾ-ಭಾರತ ಸಂಬಂಧಗಳಿಗೆ ಸಕಾರಾತ್ಮಕ ಕೊಡುಗೆ ನೀಡಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ತಿಳಿಸಿದ್ದಾರೆ. 2014ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತ ಭೇಟಿ ಹಾಗೂ ಮುಖರ್ಜಿ ಅವರೊಂದಿಗಿನ ಮಾತುಕತೆ ಉಲ್ಲೇಖಿಸಿದ್ದಾರೆ. ಇವರ ನಿಧನದಿಂದ ಭಾರತ-ಚೀನಾ ಸ್ನೇಹಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ನಿಧನಕ್ಕೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ ಎಂದಿದ್ದಾರೆ. ಜತೆಗೆ ಭಾರತ ಸರ್ಕಾರ ಹಾಗೂ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದಿದ್ದಾರೆ.