ಕಠ್ಮಂಡು : ನೇಪಾಳದ ಆಡಳಿತರೂಡ ಕಮ್ಯುನಿಸ್ಟ್ ಪಕ್ಷ (ಎನ್‌ಸಿಪಿ)ದ ಒಳ ಬಿರುಕಿನ ಮಧ್ಯೆ, ಸಚಿವ ಸಂಪುಟದಲ್ಲಿ ಬಜೆಟ್ ಅಧಿವೇಶನವನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಬಳಿಕ, ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪ ಕಮಲ್ ದಹಲ್ (ಪ್ರಚಂಡ), ನೇಪಾಳದ ಅಧ್ಯಕ್ಷೆ ಬಿಡಿಯಾ ದೇವಿ ಭಂಡಾರಿಯನ್ನು ಭೇಟಿಯಾಗಿದ್ದಾರೆ.
ಪ್ರಚಂಡ ಭೇಟಿ ವೇಳೆ ಅಧ್ಯಕ್ಷೆ ಭಂಡಾರಿ, ಆಡಳಿತ ಪಕ್ಷದೊಳಗಿನ ಇತ್ತೀಚಿನ ಬಿರುಕುಗಳ ಬಗ್ಗೆ ವಿಚಾರಿಸಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಒಂದು ದಿನದ ಹಿಂದೆ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರು ಅಧ್ಯಕ್ಷ ಭಂಡಾರಿ ಅವರನ್ನ ಭೇಟಿಯಾಗಿ ಬಜೆಟ್ ಅಧಿವೇಶನವನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಇದಕ್ಕೂ ಮುನ್ನ, ಸಂಸತ್ತಿನ ಕೆಳ ಮತ್ತು ಮೇಲ್ಮನೆಗಳ ಅಧಿವೇಶನಗಳನ್ನು ಮುಂದೂಡಲು ಕ್ಯಾಬಿನೆಟ್ ಸಭೆ ರಾಷ್ಟ್ರಪತಿಗೆ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
ಪ್ರಧಾನ ಮಂತ್ರಿಯ ಮಾಧ್ಯಮ ಸಹಾಯಕ ರಾಮ್‌ಶರಣ್ ಬಜ್‌ಗೈನ್ ಅವರ ಪ್ರಕಾರ, ಸಂಸತ್ತಿನ ಬಜೆಟ್ ಅಧಿವೇಶನವನ್ನು ಮುಂದೂಡುವ ಬಗ್ಗೆ ಪ್ರಧಾನಿ, ಎನ್‌ಸಿಪಿ ಅಧ್ಯಕ್ಷ ಪ್ರಚಂಡ ಮತ್ತು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ಅವರೊಂದಿಗೆ ಗುರುವಾರ ಪ್ರತ್ಯೇಕ ಸಮಾಲೋಚನೆ ನಡೆಸಿದ್ದಾರೆ.
ಈ ಮಧ್ಯೆ ಗುರುವಾರ ನಡೆದ ಎನ್‌ಸಿಪಿಯ ಸ್ಥಾಯಿ ಸಮಿತಿ ಸಭೆಯನ್ನು ಶುಕ್ರವಾರದವರೆಗೆ ಮುಂದೂಡಲಾಗಿದೆ. ಎನ್‌ಸಿಪಿಯ ಉನ್ನತ ನಾಯಕರು ಪ್ರಧಾನಿ ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅವರ ಇತ್ತೀಚಿನ ಭಾರತ ವಿರೋಧಿ ಹೇಳಿಕೆಗಳು ರಾಜಕೀಯವಾಗಿ ಮತ್ತು ರಾಜತಾಂತ್ರಿಕವಾಗಿ ಸರಿಯಾಗಿಲ್ಲ ಎಂದು ಹೇಳಿದ್ದಾರೆ.
ಇನ್ನು, ಅಧಿಕಾರದಿಂದ ಕೆಳಗಿಳಿಸಲು ಭಾರತ ಸಂಚು ರೂಪಿಸುತ್ತಿದೆ ಎಂಬ ಪ್ರಧಾನ ಮಂತ್ರಿಯ ಹೇಳಿಕೆ ರಾಜಕೀಯವಾಗಿ ಮತ್ತು ರಾಜತಾಂತ್ರಿಕವಾಗಿ ಸರಿಯಾಗಿಲ್ಲ ಎಂದು ಪ್ರಚಂಡ ಕೂಡ ಪುನರುಚ್ಚಿಸಿದ್ದಾರೆ.