ಇಸ್ಲಾಮಾಬಾದ್ (ಪಾಕಿಸ್ತಾನ): ಕೊರೊನಾ ವೈರಸ್ನಿಂದಾಗಿ ಹೆಚ್ಚು ಹಾನಿಗೊಳಗಾದ ನಗರಗಳಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾರ್ಚ್ 15ರಿಂದ ಎರಡು ವಾರಗಳವರೆಗೆ ಮುಚ್ಚಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಕೊರೊನಾ ವೈರಸ್ನ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಶಿಕ್ಷಣ ಸಚಿವ ಶಫ್ಕತ್ ಮಹಮೂದ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಫೈಸಲಾಬಾದ್, ಗುಜ್ರಾನ್ವಾಲಾ, ಲಾಹೋರ್, ಗುಜರಾತ್, ಮುಲ್ತಾನ್, ರಾವಲ್ಪಿಂಡಿ ಮತ್ತು ಸಿಯಾಲ್ಕೋಟ್, ಇಸ್ಲಾಮಾಬಾದ್, ಪೇಶಾವರ ಮತ್ತು ಮುಜಫರಾಬಾದ್ ಸೇರಿದಂತೆ ಪಂಜಾಬ್ ಪ್ರಾಂತ್ಯದ ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಮಹಮೂದ್ ಹೇಳಿದರು.
ಈ ನಗರಗಳು ಮತ್ತು ಜಿಲ್ಲೆಗಳಲ್ಲಿ ಮಾರ್ಚ್ 15ರಿಂದ ಮಾರ್ಚ್ 28ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಇತರೆಡೆ ಅರ್ಧದಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಾರೆ ಎಂದು ಅವರು ಹೇಳಿದರು.
ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಹಾಜರಾಗುವ ಸುಮಾರು 50 ದಶಲಕ್ಷ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಶೇಕಡಾ 50ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬಹುದು ಎಂದು ಅವರು ವಿವರಿಸಿದರು.
ಪಾಕಿಸ್ತಾನದಲ್ಲಿ ಮಾರ್ಚ್ 1 ರಿಂದ ತರಗತಿಗಳನ್ನು ಪುನರಾರಂಭವಾದ ಬಳಿಕ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿವೆ. ಪಾಕಿಸ್ತಾನದಲ್ಲಿ ಇದುವರೆಗೆ 13,324 ಸಾವುಗಳು ಸೇರಿದಂತೆ 5,95,239 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.