ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮೂರು ಜನ ಕೊರೊನಾ ವೈರಸ್ನಿಂದಾಗಿ ಸಾವನ್ನಪ್ಪಿದ್ದು, ವೈರಸ್ ಪತ್ತೆಯಾಗಿರುವ ಸಂಖ್ಯೆ 481ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಕನಿಷ್ಠ 45 ದಿನಗಳ ಕಾಲ ಜನರು ಸ್ವಯಂ ಸಂಪರ್ಕ ತಡೆಯನ್ನು ಅನುಸರಿಸುವಂತೆ ಕೋರಿದ್ದಾರೆ.
ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿಯಲ್ಲಿ ಮೂರನೇ ಸಾವು ಪ್ರಕರಣ ವರದಿಯಾಗಿದೆ. ಹಾಗೂ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಕರಾಚಿಯಲ್ಲಿಯೇ ಪತ್ತೆಯಾಗಿವೆ.
ಸಿಂಧ್ ಪ್ರಾಂತ್ಯದ ಆರೋಗ್ಯ ಸಚಿವ ಅಜ್ರಾ ಫಜಲ್ ಪೆಚುಹೋ ಈ ಬಗ್ಗೆ ಮಾಹಿತಿ ನೀಡಿ, 77 ವರ್ಷದ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ಶುಕ್ರವಾರ ಕೊರೊನಾ ಪ್ರಕರಣಗಳ ಸಂಖ್ಯೆ 249ಕ್ಕೆ ಏರಿದೆ ಎಂದು ಪ್ರಾಂತೀಯ ವಕ್ತಾರ ಮುರ್ತಾಜಾ ವಹಾಬ್ ತಿಳಿಸಿದ್ದಾರೆ. ಖೈಬರ್-ಪಖ್ತುನ್ಖ್ವಾದಲ್ಲಿ ಈ ಹಿಂದೆ ಇಬ್ಬರು ರೋಗಿಗಳು ಸಾವನ್ನಪ್ಪಿದ್ದು, ಕೊರೊನಾ ಪತ್ತೆ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿದೆ ಎಂದು ಪ್ರಾಂತೀಯ ಆರೋಗ್ಯ ಸಚಿವ ತೈಮೂರ್ ಝಾಗ್ರಾ ತಿಳಿಸಿದ್ದಾರೆ.
ಇನ್ನು ಬಲೂಚಿಸ್ತಾನ 81, ಗಿಲ್ಗಿಟ್-ಬಾಲ್ಟಿಸ್ತಾನ 21, ಇಸ್ಲಾಮಾಬಾದ್ 10 ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಒಂದು ಕೊರೊನಾ ಸೋಂಕಿತರ ಪ್ರಕರಣಗಳು ದಾಖಲಾಗಿವೆ.
COVID 19 ಜಾಗತಿಕ ಸಾಂಕ್ರಾಮಿಕತೆಯ ಹೊರತಾಗಿಯೂ, ನಮ್ಮ ಅಫ್ಘಾನಿಸ್ಥಾನದ ಬೆಂಬಲಕ್ಕೆ ನಾವು ಬದ್ಧರಾಗಿದ್ದೇವೆ. ಚಮನ್-ಸ್ಪಿನ್‌ಬೋಲ್ಡಾಕ್ ಗಡಿಯನ್ನು ತೆರೆಯಲು ಸೂಚನೆ ನೀಡಿದ್ದು, ಬಿಕ್ಕಟ್ಟಿನ ಸಮಯದಲ್ಲಿ ನಾವು ಅಫ್ಘಾನಿಸ್ತಾನದೊಂದಿಗೆ ಕೈ ಜೋಡಿಸುತ್ತೇವೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.