ಇಸ್ಲಾಮಾಬಾದ್(ಪಾಕಿಸ್ತಾನ): ಭಾರತೀಯ ಸೂಪರ್ಸಾನಿಕ್ ಕ್ಷಿಪಣಿ ಆಕಸ್ಮಿಕವಾಗಿ ಪಾಕ್ನಲ್ಲಿ ಬಿದ್ದಿರುವುದಾಗಿ ಭಾರತ ಈಗಾಗಲೇ ಒಪ್ಪಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಇದಕ್ಕೆ ತೃಪ್ತವಾಗದ ಪಾಕ್ ಜಂಟಿ ತನಿಖೆಗೆ ಒತ್ತಾಯ ಮಾಡಿದೆ.
ಭಾರತದ ಶಸ್ತ್ರಾಸ್ತ್ರರಹಿತ ಕ್ಷಿಪಣಿವೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಿದ್ದಿರುವುದಾಗಿ ಪಾಕ್ ಹೇಳಿಕೊಂಡಿತ್ತು. ಈ ಕ್ಷಿಪಣಿ 40 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿತ್ತು ಎಂದು ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ, ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಪಾಕ್ನಲ್ಲಿ ನಮ್ಮ ಕ್ಷಿಪಣಿ ಬಿದ್ದಿದೆ ಎಂದು ಒಪ್ಪಿಕೊಂಡಿತ್ತು.
ಭಾರತದ ವಿವರಣೆಯಿಂದ ತೃಪ್ತವಾಗದ ಪಾಕ್ ಇದೀಗ ಘಟನೆಯ ಸುತ್ತಮುತ್ತಲಿನ ನಿಖರ ಸತ್ಯಾಂಶ ತಿಳಿದುಕೊಳ್ಳಲು ಜಂಟಿ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಮೊಯಿದ್ ಯೂಸೂಫ್, ಸೂಕ್ಷ್ಮ ತಂತ್ರಜ್ಞಾನ ನಿರ್ವಹಿಸುವ ಭಾರತದ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದು, ಅನಧಿಕೃತ ಕ್ಷಿಪಣಿ ಉಡಾವಣೆ ವಿರುದ್ಧ ಭದ್ರತಾ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದೆ.
ಇದನ್ನೂ ಓದಿರಿ: ಆಕಸ್ಮಿಕವಾಗಿ ಪಾಕಿಸ್ತಾನದೊಳಕ್ಕೆ ಬಿದ್ದ ಭಾರತದ ಕ್ಷಿಪಣಿ: ತನಿಖೆಗೆ ಕೇಂದ್ರ ಸೂಚನೆ
ಭಾರತ ನೀಡಿರುವ ವಿವರಣೆಗಳಿಂದ ಇಂತಹ ಗಂಭೀರ ವಿಷಯ ಸುಮ್ಮನೆ ಬಿಡಲು ಸಾಧ್ಯವಿಲ್ಲ. ಕೆಲವೊಂದು ಪ್ರಶ್ನೆಗಳಿಗೆ ಅದು ಉತ್ತರಿಸಬೇಕಾಗಿದೆ. ಜೊತೆಗೆ ಆಕಸ್ಮಿಕ ಕ್ಷಿಪಣಿ ಉಡಾವಣೆ ತಡೆಗಟ್ಟುವ ಕಾರ್ಯ ವಿಧಾನಗಳ ಬಗ್ಗೆ ಭಾರತ ವಿವರಿಸಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಕ್ಷಿಪಣಿಯನ್ನ ಭಾರತದ ಸಶಸ್ತ್ರ ಪಡೆಗಳು ನಿರ್ವಹಿಸಿರುವ ಬಗ್ಗೆ ಖಚಿತತೆ ನೀಡಬೇಕು ಎಂದು ಆಗ್ರಹಿಸಿದೆ.
ಈ ವಿಚಾರವಾಗಿ ನಿನ್ನೆ ಸ್ಪಷ್ಟನೆ ನೀಡಿದ್ದ ಕೇಂದ್ರ ರಾಯಭಾರಿ ಕಚೇರಿ, ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಯೊಂದು ಪಾಕಿಸ್ತಾನದ ಗಡಿಯೊಳಕ್ಕೆ ಬಿದ್ದಿದ್ದು, ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದಾಗಿ ತಿಳಿಸಿತ್ತು. ಘಟನೆ ತೀವ್ರ ವಿಷಾದನೀಯವಾಗಿದ್ದರೂ, ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದೇ ಸಮಾಧಾನದ ವಿಷಯವಾಗಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.