ಇಸ್ಲಾಮಾಬಾದ್: ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವ ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯ (ಎಫ್‌ಎಟಿಎಫ್) ಬೂದು ಪಟ್ಟಿಯಿಂದ ಹೊರಬರುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ, ನಿಷೇಧಿತ 88 ಭಯೋತ್ಪಾದಕ ಸಂಘಟನೆ ಹಾಗೂ ಅವುಗಳ ನಾಯಕರ ಮೇಲೆ ಕಠಿಣ ನಿರ್ಬಂಧ ವಿಧಿಸಲು ಮುಂದಾಗಿದೆ.
ಉಗ್ರ ಸಂಘಟನೆಗಳ ಮುಖಂಡರಾದ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ನಂತಹ ಪಾತಕಿಗಳ ಮೇಲೆ ಕಠಿಣವಾದ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಅವರ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ಆದೇಶಿಸಿ ಪಾಕ್ ಸರ್ಕಾರ ಆದೇಶಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) 2018ರ ಜೂನ್‌ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಿತ್ತು. 2019ರ ಅಂತ್ಯದ ವೇಳೆಗೆ ಇಸ್ಲಾಮಾಬಾದ್‌ನ ಕಾರ್ಯಯೋಜನೆಯನ್ನು ಜಾರಿಗೆ ತರುವಂತೆ ಕೇಳಿಕೊಂಡಿತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆ ಗಡುವನ್ನು ವಿಸ್ತರಿಸಿತು.
ಭಯೋತ್ಪಾದಕ ಸಂಘಟನೆಗಳ ಪ್ರಮುಖ ಮುಖಂಡರಾದ 26/11 ಮುಂಬೈ ದಾಳಿ ಸಂಚುಕೋರ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಅಜರ್ ಮತ್ತು ಭೂಗತ ಜಗತ್ತಿನ ಪಾತಕಿ ಇಬ್ರಾಹಿಂ ಮೇಲೆ ಕ್ರಮ ತೆಗೆದುಕೊಂಡಿದೆ.
ಅಕ್ರಮ ವ್ಯವಹಾರದ ಸೂತ್ರಧಾರಿ ದಾವೂದ್ ಇಬ್ರಾಹಿಂ 1993ರ ಮುಂಬೈ ಬಾಂಬ್ ಸ್ಫೋಟದ ನಂತರ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದಾನೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಪಟ್ಟಿಗೆ ಅನುಸಾರವಾಗಿ ಪಾಕಿಸ್ತಾನ ಸರ್ಕಾರ 88 ಮಂದಿ ಉಗ್ರರು ಮತ್ತು ಭಯೋತ್ಪಾದಕ ಗುಂಪುಗಳ ಸದಸ್ಯರನ್ನು ನಿಷೇಧಿಸಿದೆ ಎಂದು ಪಾಕಿಸ್ತಾನದ ಪತ್ರಿಕೆ ದಿ ನ್ಯೂಸ್ ವರದಿ ಮಾಡಿದೆ.
ಭಯೋತ್ಪಾದಕ ಸಂಘಟನೆಗಳ ಪ್ರಮುಖ ಪಾತಕಿಗಳಾದ ಜಮಾತ್-ಉದ್-ದವಾ (ಜುಡಿ), ಜೆಎಂ, ತಾಲಿಬಾನ್, ದಾಶ್, ಹಕ್ಕಾನಿ ಗ್ರೂಪ್, ಅಲ್-ಖೈದಾ ಮತ್ತು ಇತರರ ಮೇಲೆ ನಿರ್ಬಂಧಗಳನ್ನು ಹೇರಿದೆ.
ಉಗ್ರ ಸಂಘಟನೆಗಳ ಮುಖಂಡರ ಸ್ಥಿರ ಮತ್ತು ಚರ ಆಸ್ತಿಗಳನ್ನು ವಶಪಡಿಸಿಕೊಳ್ಳಲಿದೆ. ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. ಈ ಭಯೋತ್ಪಾದಕರಿಗೆ ಹಣಕಾಸು ಸಂಸ್ಥೆಗಳ ಮೂಲಕ ಹಣ ವರ್ಗಾವಣೆ, ಶಸ್ತ್ರಾಸ್ತ್ರ ಖರೀದಿಸುವುದು ಮತ್ತು ವಿದೇಶ ಪ್ರವಾಸವನ್ನು ನಿರ್ಬಂಧಿಸಲಾಗಿದೆ ಎಂದು ವರದಿ ಹೇಳಿದೆ.