ಹೈದರಾಬಾದ್(ಪಾಕಿಸ್ತಾನ): ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಅವರ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನವು ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್)ಗೆ ತಿಳಿಸಿದೆ.
ಪ್ಯಾರಿಸ್ ಮೂಲದ ಭಯೋತ್ಪಾದಕ ಕಾವಲು ತಂಡವು ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಪಾಕಿಸ್ತಾನವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆಯಾ ಮತ್ತು ಜಾಗತಿಕ ಭೀತಿಯ ವಿರುದ್ಧ ಹೋರಾಡಲು ತನ್ನ ಕ್ರಿಯಾ ಯೋಜನೆಯನ್ನು ಜಾರಿಗೆ ತಂದಿದೆಯೇ ಎಂಬುದರ ಕುರಿತು ಮೌಲ್ಯಮಾಪನ ಮಾಡಲಿದೆ.
50 ವರ್ಷದ ಮಸೂದ್ ಅಜರ್ ನೇತೃತ್ವದ ಜೈಶ್-ಎ-ಮೊಹಮ್ಮದ್ ಸಂಘಟನೆ ಭಾರತದಲ್ಲಿ ಅನೇಕ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. ಸಂಸತ್ ಮೇಲಿನ ದಾಳಿ, ಪಠಾಣ್‌ಕೋಟ್ ವಾಯುಪಡೆಯ ನೆಲೆ, ಉರಿಯಲ್ಲಿ ಸೇನಾ ಶಿಬಿರಗಳು ಮತ್ತು ಪುಲ್ವಾಮಾದ ಸಿಆರ್‌ಪಿಎಫ್ ವಾಹನದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿತ್ತು.
ಪ್ಯಾರಿಸ್ ಸಭೆಯಲ್ಲಿ ನಿಗಾ ಸಂಸ್ಥೆಯ ಕಾರ್ಯಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ತೆಗೆದುಕೊಂಡ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸಲಿದೆ. ಐಎಂಎಫ್, ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಇತರ ಸಂಸ್ಥೆಗಳು ಸೇರಿದಂತೆ ವಿಶ್ವದಾದ್ಯಂತ 205 ದೇಶಗಳು ಮತ್ತು ನ್ಯಾಯವ್ಯಾಪ್ತಿಯ 800 ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಹಿಂದೆ ಪಾಕಿಸ್ತಾನ, ಭಯೋತ್ಪಾದನಾ ಕೃತ್ಯಕ್ಕೆ ಮತ್ತು ಅಕ್ರಮ ಹಣಕಾಸಿನ ವಹಿವಾಟಿಗೆ ಬೆಂಬಲ ನೀಡುತ್ತಿದ್ದರಿಂದ ಗ್ಲೋಬಲ್ ವಾಚ್ಡಾಗ್ ಈಗಾಗಲೇ ಗ್ರೇ ಲಿಸ್ಟ್(ಬೂದು ಪಟ್ಟಿ)ಗೆ ಸೇರ್ಪಡೆ ಮಾಡಿದೆ. ಭಯೋತ್ಪಾದನೆಯನ್ನು ನಿಗ್ರಹಿಸುವ ವಿಚಾರದಲ್ಲಿ 27 ಅಂಶಳನ್ನ ನೀಡಿದ್ದ ಗ್ಲೋಬಲ್ ವಾಚ್ಡಾಗ್ 22 ಅಂಶಗಳನ್ನು ಜಾರಿಗೆ ತರಲು ಫೆಬ್ರವರಿವರೆಗೆ ಗಡುವು ನೀಡಿತ್ತು. ಒಂದು ವೇಳೆ ಜಾರಿಗೆ ತರದೆ ಇದ್ದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿತ್ತು.