ಇಸ್ಲಾಮಾಬಾದ್, ಪಾಕಿಸ್ತಾನ: ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ನಾಯಕನಾಗಿದ್ದ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ಗೆ ಹಣಕಾಸಿನ ನೆರವು ನೀಡಿದ್ದರು ಮತ್ತು ಅವರ ಸರ್ಕಾರಕ್ಕೆ ಬೆಂಬಲ ನೀಡಿದ್ದರು ಎಂದು ಅಮೆರಿಕದಲ್ಲಿದ್ದ ಪಾಕ್ ಮಾಜಿ ರಾಯಭಾರಿ ಅಬಿದಾ ಹುಸೇನ್ ಹೇಳಿದ್ದಾರೆ.
ಪಾಕಿಸ್ತಾನದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಅಬಿದಾ ಹುಸೇನ್ ಈ ರೀತಿಯಾಗಿ ಹೇಳಿದ್ದಾರೆಂದು ಉಲ್ಲೇಖಿಸಿದ್ದು, ಒಂದು ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ನವಾಜ್ ಷರೀಫ್ ಅವರನ್ನು ಬೆಂಬಲಿಸಿದ್ದರು. ಜೊತೆಗೆ ಹಣಕಾಸಿನ ನೆರವನ್ನೂ ನೀಡುತ್ತಿದ್ದರು ಎಂದು ಹೇಳಿದೆ.
ನವಾಜ್ ಷರೀಫ್ ಅವರ ಸರ್ಕಾರದ ಮಾಜಿ ಕ್ಯಾಬಿನೆಟ್ ಸದಸ್ಯರೂ ಆಗಿದ್ದ ಅಬಿದಾ, ಒಂದು ಕಾಲದಲ್ಲಿ ಬಿನ್ ಲಾಡೆನ್ ಜನಪ್ರಿಯರಾಗಿದ್ದರು ಮತ್ತು ಅಮೆರಿಕನ್ನರು ಸೇರಿದಂತೆ ಎಲ್ಲರೂ ಲಾಡೆನ್ನನ್ನು ಇಷ್ಟಪಟ್ಟಿದ್ದರು. ಆದರೆ ಕಾಲಾಂತರದಲ್ಲಿ ಅವರನ್ನು ಅಪರಿಚಿತರು ಎಂಬಂತೆ ಇಲ್ಲಿನ ಸರ್ಕಾರ ಪರಿಗಣಿಸಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋರ್ಟ್ನಲ್ಲಿ ಮುಖ್ಯನ್ಯಾಯಮೂರ್ತಿ.. ಕ್ರೀಡಾಂಗಣದಲ್ಲಿ ಕ್ರಿಕೆಟಿಗ.!
ಪಾಕಿಸ್ತಾನಕ್ಕೆ ಧನಸಹಾಯ ಪಡೆಯಲು ಹಾಗೂ ಭುಟ್ಟೋ ಸರ್ಕಾರವನ್ನು ಪದಚ್ಯುತಗೊಳಿಸಲು ನವಾಜ್ ಷರೀಫ್‌ಗೆ ಒಸಾಮಾ ಬಿನ್ ಲಾಡೆನ್ 10 ಮಿಲಿಯನ್ ಅಮೆರಿಕನ್ ಡಾಲರ್ ಹಣ ನೀಡಿದ್ದು, ಬೆಂಬಲವನ್ನೂ ನೀಡಿದ್ದರು ಎಂದು ತೆಹ್ರೀಕ್-ಇ-ಇನ್ಸಾಫ್ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಫಾರೂಖ್ ಹಬೀಬ್ ಹೇಳಿದ ಬೆನ್ನಲ್ಲೇ ಅಬಿದಾ ಹುಸೇನ್ ಈ ಹೇಳಿಕೆ ನೀಡಿದ್ದಾರೆ.
ಸತತ ಮೂರು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ನವಾಜ್ ಷರೀಫ್, ಕಾಸ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ನಿಂದ ಹಣ ತೆಗೆದುಕೊಂಡಿದ್ದರೆಂದು ಆರೋಪ ಮಾಡಲಾಗಿದೆ. ನವಾಜ್ 1990-93, 1997-98, ಮತ್ತು 2013-17ರವರೆಗೆ ಪಾಕ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಈಗ ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರದಿಂದ ಉಚ್ಚಾಟನೆ ಮಾಡಲ್ಪಟ್ಟಿರುವ ಷರೀಫ್ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಇಂಗ್ಲೆಂಡ್ಗೆ ತೆರಳಿ ದೇಶಭ್ರಷ್ಟರಾಗಿದ್ದಾರೆ.