ಕಠ್ಮಂಡು: ನೇಪಾಳದಲ್ಲಿ ಒಂದೇ ದಿನ 83 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 217 ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ 26 ಪ್ರಕರಣಗಳು ಇಂಡೋ-ನೇಪಾಳ ಗಡಿ ಪ್ರದೇಶದಿಂದ ದಾಖಲಾಗಿದೆ. ಮಾರಣಾಂತಿಕ ಕೊರೊನಾ ಹರಡುವಿಕೆ ತಡೆಗೆ ರಾಷ್ಟ್ರವ್ಯಾಪಿ ಲಾಕ್ಡೌನ್ ಅಡಿ ನೇಪಾಳದಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ ಅನ್ನೋದು ಸಂತಸದ ವಿಚಾರ. ಕೋವಿಡ್ ಸಾವುಗಳು ದಾಖಲಾಗದ ದೇಶಗಳ ಪಟ್ಟಿಗೆ ನೇಪಾಳವೂ ಈಗ ಸೇರ್ಪಡೆ ಆಗಿದೆ.
ಇಂದು ಹೆಚ್ಚಿನ ಕೋವಿಡ್ ಪ್ರಕರಣಗಳು ಇಂಡೋ-ನೇಪಾಳ ಗಡಿ ಪ್ರದೇಶದಿಂದ ವರದಿಯಾಗಿದೆ. ಹೀಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ದಕ್ಷಿಣ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ ಆಂತರಿಕ ಪ್ರಸರಣವನ್ನು ತಡೆಯಲು ಅಂತರ - ಜಿಲ್ಲಾ ಪ್ರಯಾಣವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.