ಇಸ್ಲಾಮಾಬಾದ್(ಪಾಕಿಸ್ತಾನ): 'ಪ್ಯಾಲೆಸ್ತೀನಿಯರು ತಮ್ಮ ಹಕ್ಕುಗಳನ್ನು ಪಡೆಯುವವರೆಗೆ ಅವರು ಇಸ್ರೇಲ್ ರಾಷ್ಟ್ರದವರೆಂದು ಪರಿಗಣಿಸುವುದಿಲ್ಲ' ಎಂದು ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರು ಆ ಸಮುದಾಯದ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದರು ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಮಂಗಳವಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಪಾಕ್ನ ವಿದೇಶಾಂಗ ನೀತಗಳ ಬಗ್ಗೆ ಮಾತನಾಡಿ, ಚೀನಾ ಸಂಬಂಧ, ಇಸ್ರೇಲ್, ಕಾಶ್ಮೀರ ಸಮಸ್ಯೆ, ಅಫ್ಗಾನ್ ಶಾಂತಿ ಪ್ರಕ್ರಿಯೆ, ಆರ್ಥಿಕತೆ, ರಾಷ್ಟ್ರೀಯ ಸಮಸ್ಯೆಗಳು ಮತ್ತು ರಾಜಕೀಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರು ಸುದೀರ್ಘವಾಗಿ ಚರ್ಚಿಸಿದ್ದಾರೆ ಎಂದು ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಇಸ್ರೇಲ್ ಬಗ್ಗೆ ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ. ಪಾಕಿಸ್ತಾನವು ಇಸ್ರೇಲ್ ಅನ್ನು ಎಂದಿಗೂ ಗುರುತಿಸಲು ಸಾಧ್ಯವಿಲ್ಲ. ಇಸ್ರೇಲ್ ದೇಶವನ್ನು ಗುರುತಿಸಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಚೀನಾದ ಬಗ್ಗೆ ಪ್ರತಿಕ್ರಿಯಿಸಿದ ಖಾನ್, ಬೀಜಿಂಗ್‌ನೊಂದಿಗಿನ ಸಂಪರ್ಕ, ಸ್ನೇಹ ಭವಿಷ್ಯದಲ್ಲಿಯೂ ಮುಂದುವರಿಯಲಿದೆ. ನಮ್ಮ ದೇಶದ ಒಳ್ಳೆಯ ಹಾಗೂ ಕೆಟ್ಟ ಸಮಯದಲ್ಲೂ ಚೀನಾ ದೇಶ ಇಸ್ಲಾಮಾಬಾದ್ ಪರ ನಿಂತಿದೆ ಎಂದು ಹೇಳಿದರು.
ಬೀಜಿಂಗ್‌ನೊಂದಿಗಿನ ನಮ್ಮ ಸಂಬಂಧ ಮತ್ತಷ್ಟು ಬಲಪಡಿಸುತ್ತಿದ್ದೇವೆ. ಅವರಿಗೂ ಸಹ ಪಾಕಿಸ್ತಾನದ ಜೊತೆಗಿನ ಸಂಬಂಧ ಹಾಗೂ ಬಾಂಧವ್ಯ ಅತ್ಯವಶ್ಯಕವಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.