ಪೇಶಾವರ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಕೊನೆಗೂ ಹೊಸ ಸರ್ಕಾರವನ್ನು ಷೋಷಿಸಿದೆ. ಹೊಸ ಸರ್ಕಾರದಲ್ಲಿ ಅಮೆರಿಕ ಘೋಷಿತ ಹಕ್ಕಾನಿ ಭಯೋತ್ಪಾದಕ ಸಂಘಟನೆಯ ಉಗ್ರನಿಗೂ ಮಹತ್ವದ ಸ್ಥಾನಮಾನ ನೀಡಲಾಗಿದೆ.
ತಾಲಿಬಾನ್ ಸಂಘಟನೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ 'ರೆಹಬಾರಿ ಶುರಾ' ಸಮಿತಿಯ ಮುಖ್ಯಸ್ಥ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅಫ್ಘಾನಿಸ್ತಾನದ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಅಧ್ಯಕ್ಷ ಮುಲ್ಲಾ ಅಬ್ದುಲ್ ಘನಿ ಬರದಾರ್ ಹಾಗೂ ಮುಲ್ಲಾ ಅಬ್ದುಸ್ ಸಲಾಂ ಅವರು ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ಇದನ್ನು ಅಧಿಕೃತವಾಗಿ ಮುಂದಿನ ವಾರ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಉಗ್ರ ಸಿರಾಜುದ್ದೀನ್ ಹಕ್ಕಾನಿ ಆಂತರಿಕ ವ್ಯವಹಾರಗಳ ಖಾತೆ ಸಚಿವ!
ಅಚ್ಚರಿಯ ಬೆಳವಣಿಗೆ ಎಂದರೆ ಸಚಿವ ಸಂಪುಟದಲ್ಲಿ ಭಾರತ ವಿರೋಧಿ ಹಕ್ಕಾನಿ ಭಯೋತ್ಪಾದಕ ಜಾಲದ ನಾಯಕರಲ್ಲೊಬ್ಬ ಹಾಗು ಅಮೆರಿಕದ ಮೋಸ್ಟ್ ವಾಂಟೆಡ್ ಉಗ್ರ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ವ್ಯವಹಾರಗಳ ಸಚಿವ ಸ್ಥಾನ ನೀಡಲಾಗಿದೆ.
ಯಾರು ಈ ಮುಲ್ಲಾ ಹಸನ್?
ತಾಲಿಬಾನ್ ಸರ್ಕಾರದ ಮುಖ್ಯಸ್ಥ ಮುಲ್ಲಾ ಹಸನ್ ತಾಲಿಬಾನಿಗಳ ಜನ್ಮಸ್ಥಳ ಕಂದಹಾರ್‌ಗೆ ಸೇರಿದವರು. ಸಶಸ್ತ್ರ ಚಳುವಳಿಯ ಸ್ಥಾಪಕರಲ್ಲಿ ಇವರೂ ಒಬ್ಬರು. ತಾಲಿಬಾನ್ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ರೆಹಬಾರಿ ಶೂರಾದ ಮುಖ್ಯಸ್ಥನಾಗಿ 20 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಮತ್ತು ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ಪಾಕ್ ಐಎಸ್ಐ ಮುಖ್ಯಸ್ಥನಿಂದ ಮುಲ್ಲಾ ಬರದಾರ್ ಭೇಟಿ: ದೃಢಪಡಿಸಿದ ತಾಲಿಬಾನ್