ಇಸ್ಲಾಮಾಬಾದ್: ಪಾಕಿಸ್ತಾನದ ಫೈಸಲಾಬಾದ್‌ನ ಸದರ್ ಜರಾನ್‌ವಾಲಾ ಪ್ರದೇಶದಲ್ಲಿ ಗನ್ ಪಾಯಿಂಟ್‌ನಲ್ಲಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಯಿ-ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 15 ದಿನಗಳ ನಂತರ ಇಬ್ಬರು ಶಂಕಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ವರದಿಯ ಪ್ರಕಾರ, 60 ವರ್ಷ ವಯಸ್ಸಿನ ಮಹಿಳೆ ಮತ್ತು ಅವಳ 37 ವರ್ಷದ ಮಗಳು ಬಂಡಿಯಲ್ಲಿ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ತಡೆದು ಗನ್‌ಪಾಯಿಂಟ್‌ನಲ್ಲಿ ಹತ್ತಿರದ ಕಬ್ಬಿನ ಹೊಲಕ್ಕೆ ಕರೆದೊಯ್ದು ದುಷ್ಕೃತ್ಯವೆಸಗಿದ್ದಾರೆ ಎನ್ನಲಾಗ್ತಿದೆ.
ಇಬ್ಬರು ವ್ಯಕ್ತಿಗಳು ತಾಯಿ ಮತ್ತು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತರು ಹತ್ತಿರದ ಹಳ್ಳಿಯೊಂದರಲ್ಲಿ ಶಂಕಿತರಲ್ಲಿ ಒಬ್ಬನನ್ನು ಗುರುತಿಸಿ ಪೊಲೀಸರಿಗೆ ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬ ಪ್ರತಿಭಟನೆ ನಡೆಸಿದ 15 ದಿನಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.