ಚಂಡೀಗಢ: ಜಾತಿ, ಧರ್ಮದ ಕಟ್ಟುಪಾಡುಗಳನ್ನು ಮುರಿ ಅಫ್ಘಾನಿಸ್ತಾನದ ಹುಡುಗಿಯೊಬ್ಬಳು ಚಂಡೀಗಢದ ಹುಡುಗನನ್ನು ಮದುವೆಯಾಗಿದ್ದಾಳೆ. ಈಗ ಇಬ್ಬರಿಗೂ ಅಫ್ಘಾನಿಸ್ತಾನದಿಂದ ಕೊಲೆ ಬೆದರಿಕೆಗಳು ಬರುತ್ತಿದ್ದು, ಪೊಲೀಸರಿಂದ ದೂರಿನ ನಂತರ ಇಬ್ಬರಿಗೂ ಭದ್ರತೆ ಸಿಕ್ಕಿದೆ. ಆದರೆ ಇಬ್ಬರೂ ಭಯದ ನೆರಳಿನಲ್ಲಿ ಜೀವನ ನಡೆಸುತ್ತಿದ್ದಾರೆ.
ಚಂಡೀಗಢದ ನೀರಜ್ ಯುವಕ, ಅಫ್ಘಾನಿಸ್ತಾನದ ಯುವತಿ ಮಲಾಲಾ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದ ವಿರೋಧದ ನಡುವೆ ಕಳೆದೆರಡು ವರ್ಷಗಳ ಹಿಂದೆ ವಿವಾಹವಾಗಿದ್ದಾರೆ. ಅಂದಿನಿಂದ ಯುವತಿ ಕುಟುಂಬಸ್ಥರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಕೊಲೆ ಬೆದರಿಕೆ ಕೂಡ ಬರುತ್ತಿವೆ. ಈ ಕುರಿತಂತೆ ಈಟಿವಿ ಭಾರತ ಯುವಕ - ಯುವತಿಯ ಜೊತೆ ಸಂದರ್ಶನ ನಡೆಸಿದೆ.
ರೆಸ್ಟೋರೆಂಟ್ನಲ್ಲಿ ಹುಟ್ಟಿದ ಪ್ರೀತಿ: ಕಳೆದೆರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದ ಯುವತಿ ಮಲಾಲಾ ಚಂಡೀಗಢಕ್ಕೆ ವ್ಯಾಸಂಗಕ್ಕೆ ಆಗಮಿಸಿದ್ದರು. ಈ ವೇಳೆ ರೆಸ್ಟೋರೆಂಟ್ವೊಂದರಲ್ಲಿ ನೀರಜ್ ಮಲಿಕ್ ಅವರನ್ನು ಭೇಟಿಯಾಗಿದ್ದರು. ಅಂದಿನಿಂದ ಇಬ್ಬರೂ ಮಾತನಾಡಲು ಪ್ರಾರಂಭಿಸಿದ್ದರು.
ಕೆಲವು ದಿನಗಳ ನಂತರ ಮಲಾಲಾಳ ಬಳಿ ಪ್ರೀತಿ ನಿವೇದನೆ ಹೇಳಿಕೊಂಡಿದ್ದ ನೀರಜ್, ಮದುವೆಯಾಗುವಂತೆ ಮನವೊಲಿಸಿದ್ದರು. ಬಳಿಕ ಇಬ್ಬರು ಮನೆಯಲ್ಲಿ ಮದುವೆ ಬಗ್ಗೆ ಪ್ರಸ್ತಾಪ ಕೂಡ ಮಾಡಿದ್ದರು. ಆದರೆ ಮಲಾಲಾ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದರ ನಡುವೆಯೇ 2020ರಲ್ಲಿ ಇಬ್ಬರು ಮದುವೆಯಾಗಿದ್ದಾರೆ.
ಮದುವೆಗೆ ಯುವತಿ ಕುಟುಂಬಸ್ಥರಿಂದ ವಿರೋಧ: ಮಲಾಲಾ ಹಿಂದೂ ಯುವಕ ನೀರಜ್ ಮಲಿಕ್ ಅವರನ್ನು ವಿವಾಹ ಆದಾಗಿನಿಂದ ಯುವತಿಯ ತಾಯಿ ಮತ್ತು ಸಹೋದರರು ನಿರಂತರವಾಗಿ ಫೋನ್ ಮೂಲಕ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರಂತೆ. ಈ ಮೊದಲ ಮಲಾಲಾಗೆ ಪೋಷಕರು ಸಂಬಂಧಿಕರಲ್ಲೇ ವಿವಾಹ ಮಾಡಲು ನಿಶ್ಚಯಿಸಿದ್ದರು. ಆದರೆ ಇದಕ್ಕೆ ಮಲಾಲಾ ವಿರೋಧ ವ್ಯಕ್ತಪಡಿಸಿದ್ದರು.
ಹಲವು ದೇಶಗಳಿಂದ ಬರುತ್ತಿವೆ ಬೆದರಿಕೆ ಕರೆಗಳು : ಅಫ್ಘಾನಿಸ್ತಾನಿಯಾಗಿ ಹಿಂದೂ ಯುವಕನನ್ನು ವಿವಾಹವಾಗಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ದಂಪತಿಗೆ ಅಫ್ಘಾನಿಸ್ತಾನಿಗಳು ಜೀವ ಬೆದರಿಕೆ ಹಾಕುತ್ತಿದ್ದರಂತೆ. ಕೇವಲ ಅಫ್ಘಾನಿಸ್ತಾನ ಮಾತ್ರವಲ್ಲದೇ ಪಾಕಿಸ್ತಾನ, ಇರಾನ್, ಇರಾಕ್ ಹಾಗೂ ಹಲವು ಅರಬ್ ರಾಷ್ಟ್ರಗಳಿಂದಲೂ ಬೆದರಿಕೆ ಕರೆಗಳು ಬರುತ್ತಿಯಂತೆ. ಮುಸ್ಲಿಮೇತರರನ್ನು ಮದುವೆಯಾಗಿದ್ದಕ್ಕೆ ಒಂದೆ ಶಿಕ್ಷೆ, ನಿಮಗೂ ಅದೇ ಶಿಕ್ಷೆ ಆಗುತ್ತದೆ ಎಂದೆಲ್ಲ ಫೋನ್‌ನಲ್ಲಿ ಧಮ್ಕಿ ಕೂಡ ಹಾಕಿದ್ದಾರಂತೆ ಎಂದು ನೀರಜ್ ಮಲಿಕ್ ಹೇಳಿದ್ದಾರೆ.
ಪೊಲೀಸ್ ಮೊರೆ ಹೋದ ದಂಪತಿ: ಜೀವ ಬೆದರಿಕೆ ಕರೆಗಳು ಹೆಚ್ಚಾಗುತ್ತಿದ್ದಂತೆ ಭಯಭೀತರಾದ ದಂಪತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಖಾಕಿ, ಜೋಡಿಹಕ್ಕಿಗಳಿಗೆ ರಕ್ಷಣೆ ನೀಡಿದ್ದು, ಅಧಿಕಾರಿಯನ್ನು ನಿಯೋಜನೆ ಮಾಡಿದೆ. ಇಷ್ಟಾದರೂ ಕೂಡ ಆಫ್ಘನ್ರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ.
ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ಪತ್ರ :ಇಷ್ಟು ಮಾತ್ರವಲ್ಲದೇ ದಂಪತಿ ವಾಸಿಸುವ ಪ್ರದೇಶದಲ್ಲಿ ಅನೇಕ ಆಫ್ಘನ್ ಜನರು ವಾಸಿಸುತ್ತಿದ್ದು, ಧರ್ಮದ ಹೆಸರಿನಲ್ಲಿ ಯಾರೂ ತನಗೆ ಹಾನಿ ಮಾಡುತ್ತಾರೋ ಎಂಬ ಆತಂಕ ಇಬ್ಬರಲ್ಲಿ ಮನೆ ಮಾಡಿದೆ. ಈ ಸಂಬಂಧ ಮಲಾಲಾ, ನೀರಜ್ ಸಮರ್ಪಕವಾದ ಭದ್ರತೆ ಒದಗಿಸುವ ಮೂಲಕ ಸಮಸ್ಯೆ ಸೂಕ್ತ ಪರಿಹಾರ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೂಡಲೇ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕೆಂಬುದು ನಮ್ಮ ಆಶಯ.
ಇದನ್ನೂ ಓದಿ: 32 ವರ್ಷಗಳಿಂದ ಹೆಂಡತಿಯ ಚಿತಾಭಸ್ಮದೊಂದಿಗೆ ಬದುಕುತ್ತಿರುವ ಭೋಲಾನಾಥ್.. ಕಾರಣ?