ಟೋಕಿಯೊ: ಜಪಾನ್‌ನ ನೂತನ ಪ್ರಧಾನಿ ಯೋಶಿಹಿಡೆ ಸುಗಾ ಅವರು ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ದೂರುವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ಸುಗಾ, ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಲು ಒಪ್ಪಿಗೆ ಸೂಚಿಸಿವೆ. ಜೊತೆಗೆ ಉನ್ನತ ಮಟ್ಟದ ಸಭೆಗಳು, ಶೃಂಗಸಭೆಗಳನ್ನು ನಡೆಸುವುದು ಹಾಗೂ ಭಾಗವಹಿಸುವಿಕೆ ಬಗ್ಗೆ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ. ಆದರೆ ಜಪಾನ್‌ಗೆ ಕ್ಸಿ ಜಿನ್ಪಿಂಗ್ ಭೇಟಿ ನೀಡುವ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.
ಜಪಾನ್ - ಚೀನಾದ ಸಂಬಂಧ ಅತ್ಯಂತ ನಿರ್ಣಾಯಕ. ಇದು ಕೇವಲ ಎರಡು ರಾಷ್ಟ್ರಗಳ ಸಂಬಂಧ ಮಾತ್ರವಲ್ಲದೇ, ನೆರೆಯ ದೇಶಗಳು ಹಾಗೂ ಅಂತಾರಾಷ್ಟ್ರೀಯ ಸಮುದಾಯದ ವಿಷಯ ಎಂಬುದನ್ನು ಕ್ಸಿಗೆ ಹೇಳಿದ್ದೇನೆ ಎಂದು ಸುಗಾ ವಿವರಿಸಿದರು.
ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಯೋಶಿಹಿಡೆ ಸುಗಾ ಬಂದ ನಂತರ ಅವರು ಚೀನಾದ ಅಧ್ಯಕ್ಷರೊಂದಿಗೆ ನಡೆಸಿದ ಮೊದಲ ಮಾತುಕತೆ ಇದಾಗಿದೆ.
ಕಳೆದ ಏಪ್ರಿಲ್‌ನಲ್ಲಿ ಕ್ಸಿ ಜಿನ್ ಪಿಂಗ್ ಅವರು ಜಪಾನ್‌ಗೆ ಭೇಟಿ ನೀಡಬೇಕಾಗಿತ್ತು. ಆದರೆ, ಕೋವಿಡ್-19 ನಿಂದಾಗಿ ಕ್ಸಿ ಭೇಟಿಯನ್ನು ಮುಂದೂಡಲಾಯಿತು. ಚೀನಾ ಹಾಂಕಾಂಗ್ ಹಾಗೂ ಸಮುದ್ರಗಳ ಗಡಿಯಲ್ಲಿ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಜಪಾನಿಗರು, ಜಿನ್ ಪಿಂಗ್ ಭೇಟಿ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ.