ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮೆಲ್ಬೋರ್ನ್‌ನಲ್ಲಿ ಇಂದು ನಡೆದ 4ನೇ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದಾರೆ. ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆಯುವ ಸಭೆ ಇದಾಗಿದೆ.
ಜೈಶಂಕರ್ ಅವರು ಅಧಿಕಾರ ವಹಿಸಿಕೊಂಡ ನಂತರ ಆಸ್ಟ್ರೇಲಿಯಾಕ್ಕೆ ನೀಡಿದ ಮೊದಲ ಭೇಟಿ ಇದಾಗಿದ್ದು, ಫೆಬ್ರವರಿ 10 ರಿಂದ 13ರವರೆಗೆ ಆಸ್ಟ್ರೇಲಿಯಾದಲ್ಲಿರಲಿದ್ದಾರೆ. ಬಳಿಕ ಫೆಬ್ರವರಿ 13ರಿಂದ 15ರವರೆಗೆ ಫಿಲಿಪೈನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ.
ಕ್ವಾಡ್ (ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್) ಇದು ನಾಲ್ಕು ರಾಷ್ಟ್ರಗಳ ಪಾಲುದಾರಿಕೆಯಾಗಿದ್ದು, ಕ್ವಾಡ್ ಸಭೆಯಲ್ಲಿ ಆ ನಾಲ್ಕು ದೇಶಗಳ ವಿದೇಶಾಂಗ ಸಚಿವರು ಪಾಲ್ಗೊಳ್ಳುತ್ತಾರೆ. ಇಂದು ನಡೆಯುತ್ತಿರುವುದು ನಾಲ್ಕನೇ ಕ್ವಾಡ್ ಸಭೆಯಾಗಿದೆ. ಈ ಸಭೆಯಲ್ಲಿ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ.
ಇಂದಿನ ಸಭೆಯ ಪ್ರಮುಖ ಅಂಶಗಳು:
ಇಂದಿನ ಸಭೆಯಲ್ಲಿ ಜೈಶಂಕರ್ ಜೊತೆ ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಮಾರಿಸ್ ಪೇನ್, ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪಾಲ್ಗೊಂಡಿದ್ದರು. ಭಾರತದಲ್ಲಿ ಹೆಚ್ಚುವರಿಯಾಗಿ ಒಂದು ಬಿಲಿಯನ್ ಕೋವಿಡ್ ಲಸಿಕಾ ಡೋಸ್‌ಗಳ ಉತ್ಪಾದನೆಯನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್ ತಿಳಿಸಿದರು.
ಆಸ್ಟ್ರೇಲಿಯಾಕ್ಕೆ ಭಾರತ-ಜಪಾನ್-ಯುಎಸ್ ಆತ್ಮೀಯ ಪಾಲುದಾರರು. ನಮ್ಮದು ಮುಕ್ತತೆ, ಪಾರದರ್ಶಕತೆ, ಪ್ರಾಯೋಗಿಕ ಸಹಕಾರ, ಕೋವಿಡ್ ಸಾಂಕ್ರಾಮಿಕ, ಪ್ರಾದೇಶಿಕ ಭದ್ರತೆ ವಿಚಾರದಲ್ಲಿ ಬದ್ಧವಾಗಿರುವ ಪಾಲುದಾರಿಕೆಯಾಗಿದೆ. ಇಂಡೋ-ಪೆಸಿಫಿಕ್ ವಿವಾದ ಸಂಬಂಧ ಸವಾಲುಗಳನ್ನು ಎದುರಿಸಲು ನಾಲ್ಕು ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಪೇನ್ ಹೇಳಿದರು.
ಬಳಿಕ ಮಾತನಾಡಿದ ಜೈಶಂಕರ್, ಫೆಬ್ರವರಿ 2021ರಲ್ಲಿ ನಮ್ಮ ಕೊನೆಯ ಸಂವಾದ ನಡೆದಾಗಿನಿಂದಲೂ ಭೌಗೋಳಿಕ-ರಾಜಕೀಯ-ಆರ್ಥಿಕ ಜಾಗತಿಕ ಸನ್ನಿವೇಶವು ಹೆಚ್ಚು ಸಂಕೀರ್ಣವಾಗಿದೆ. ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಬಲವಂತದಿಂದ ಮುಕ್ತವಾದ ನಿಯಮ-ಆಧಾರಿತ ಅಂತಾರಾಷ್ಟ್ರೀಯ ಆದೇಶವನ್ನು ಎತ್ತಿಹಿಡಿಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ, ಕಾನೂನಿನ ನಿಯಮ, ಪಾರದರ್ಶಕತೆ, ನ್ಯಾವಿಗೇಷನ್ ಸ್ವಾತಂತ್ರ್ಯ ಮತ್ತು ಶಾಂತಿಯುತ ನಿರ್ಣಯದ ಗೌರವವನ್ನು ಆಧರಿಸಿದ ಯೋಜನೆ ನಮ್ಮದಾಗಿದೆ ಎಂದರು.
ಇದನ್ನೂ ಓದಿ: ಸೆನ್ಸೆಕ್ಸ್ ಕುಸಿತ : ಇಂದು ಆರಂಭದಲ್ಲೇ 1000 ಅಂಕ ಕಳೆದುಕೊಂಡು ತಲ್ಲಣ
ಕೊರೊನಾ ಸಾಂಕ್ರಾಮಿಕವು ನಮ್ಮ ಮೇಲೆ ಪರಿಣಾಮ ಬೀರುತ್ತಲೇ ಇರುವುದರಿಂದ, ಜಾಗತಿಕ ಆರೋಗ್ಯ ಭದ್ರತೆ, ಕ್ವಾಡ್ ಲಸಿಕೆ ಉಪಕ್ರಮ ಮತ್ತು ನಮ್ಮ ಸಾಮೂಹಿಕ ಲಸಿಕೆ ವಿತರಣೆಯನ್ನು ಪರಿಹರಿಸಲು ನಾವು ಸಾಮೂಹಿಕ ಪ್ರಯತ್ನಗಳನ್ನು ಕೈಗೊಂಡಿದ್ದೇವೆ. ಇಂಡೋ-ಪೆಸಿಫಿಕ್‌ನಲ್ಲಿರುವ ದೇಶಗಳಿಗೆ ಈ ಸವಾಲುಗಳನ್ನು ಎದುರಿಸಲು ಇವು ಬಹಳ ನಿರ್ಣಾಯಕವಾಗಿವೆ ಎಂದು ಜೈಶಂಕರ್ ಮಾಹಿತಿ ನೀಡಿದರು.
ಇಂದಿನ ಸಭೆಯು ಪ್ರಗತಿಯನ್ನು ನಿರ್ಮಿಸುವ ಬಗ್ಗೆ ನಡೆಯುತ್ತಿರುವ ಸಭೆಯಾಗಿದೆ. ಕೋವಿಡ್ ಸಾಂಕ್ರಾಮಿಕವನ್ನು ಒಟ್ಟಾಗಿ ಕೊನೆಗೊಳಿಸುವುದು ಇದರಲ್ಲಿ ಒಂದು. 2022 ರ ಅಂತ್ಯದ ವೇಳೆಗೆ 1 ಬಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸುವ ನಮ್ಮ ಗುರಿಯತ್ತ ನಾವು ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಭರವಸೆ ನೀಡಿದರು.