ನವದೆಹಲಿ : ಸಾಕಷ್ಟು ಬೆಳವಣಿಗೆಗಳ ರಾಜಕೀಯ ಮತ್ತು ಮಿಲಿಟರಿ ನಂತರ ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚಿಸಲು ಸಿದ್ಧತೆ ನಡೆಸಿರುವ ತಾಲಿಬಾನ್ ಉಗ್ರ ಸಂಘಟನೆಯಿಂದ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ)ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ತನ್ನ ನೇತೃತ್ವದ ತಂಡದೊಂದಿಗೆ ಶನಿವಾರ ಕಾಬೂಲ್ಗೆ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಮೂಲಕ ಭಾರತವೂ ಸೇರಿ ಹಲವು ರಾಷ್ಟ್ರಗಳಲ್ಲಿ ಹಲವಾರು ಅನುಮಾನಗಳು ಮೂಡಿವೆ.
ಅಂತಾರಾಷ್ಟ್ರೀಯ ಸಮುದಾಯಗಳ ಮನವೊಲಿಕೆಗೆ ತಾಲಿಬಾನ್ ಈಗಾಗಲೇ ಹರಸಾಹಸ ನಡೆಸುತ್ತಿದೆ. ಅದರಲ್ಲೂ ಸರ್ಕಾರ ರಚನೆ ಅಂತಾರಾಷ್ಟ್ರೀಯ ಸಮುದಾಯಗಳಿಗೆ ಒಪ್ಪಿಗೆಯಾಗುವಂತಿರಬೇಕೆಂದು ತಾಲಿಬಾನ್ ಹವಣಿಸುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಐಎಸ್ಐ ಮುಖ್ಯಸ್ಥ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ತಾಲಿಬಾನ್‌ನ ಪ್ರಮುಖ ನಾಯಕರನ್ನು ಫೈಜ್ ಹಮೀದ್ ಭೇಟಿ ಮಾಡಿ, ಪಾಕ್-ಅಫ್ಘನ್ ಭದ್ರತೆ, ಆರ್ಥಿಕತೆ ಮತ್ತು ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪಾಕಿಸ್ತಾನ್ ಅಬ್ಸರ್ವರ್ ನ್ಯೂಸ್ ಪೇಪರ್ ವರದಿ ಮಾಡಿದೆ.
ತಾಲಿಬಾನ್ ಆಡಳಿತಕ್ಕೆ ಬೆದರಿ, ಅಫ್ಘಾನಿಸ್ತಾನದಿಂದ ಹೊರಗೆ ತೆರಳುತ್ತಿರುವ ಪ್ರಜೆಗಳ ಬಗ್ಗೆ ತಾಲಿಬಾನ್ ನಾಯಕರು ಮತ್ತು ಫೈಜ್ ಹಮೀದ್ ಚರ್ಚೆ ನಡೆಸಲಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಮತ್ತೊಂದು ಆಯಾಮದಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ್ದಕ್ಕೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ. ಈಗ ಐಎಸ್ಐ ಮುಖ್ಯಸ್ಥನ ಭೇಟಿ, ಪಾಕಿಸ್ತಾನದ ಮೇಲಿನ ಆರೋಪಕ್ಕೆ ಮತ್ತಷ್ಟು ಕುಮ್ಮಕ್ಕು ನೀಡುತ್ತಿದೆ.
ಇದನ್ನೂ ಓದಿ: ಅಸ್ಸೋಂನ ಆರು ಬಂಡುಕೋರ ಗುಂಪುಗಳೊಡನೆ ಶಾಂತಿ ಒಪ್ಪಂದ : ಗೃಹ ಸಚಿವ ಅಮಿತ್ ಶಾ