ಟೆಹರಾನ್ : ಫೆಡರಲ್ ವ್ಯಾಪಾರ ಮಾಹಿತಿಗಳನ್ನು ಕದಿಯಲು ಪ್ರಯತ್ನಿಸಿದ ಆರೋಪದಲ್ಲಿ ಅಮೆರಿಕದಲ್ಲಿ ಬಂಧನಕ್ಕೊಳಗಾಗಿ ಬಳಿಕ ಖಲಾಸೆಗೊಂಡಿದ್ದ ಇರಾನಿನ ವಿಜ್ಞಾನಿ ಸ್ವದೇಶಕ್ಕೆ ಹಿಂದಿರುಗುತ್ತಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಹೇಳಿದ್ದಾರೆ.
ಈ ಬಗ್ಗೆ ಇನ್ಸ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಜರೀಫ್ ಪ್ರಕರಣದಿಂದ ಖುಲಾಸೆಗೊಂಡ ಬಳಿಕ ವಿಜ್ಞಾನಿ ಸಿರಾಸ್ ಅಸ್ಗರಿ ವಿಮಾನದ ಮೂಲಕ ಹಿಂದಿರುಗುತ್ತಿದ್ದಾರೆ ಎಂದಿದ್ದಾರೆ. ಅಲ್ಲದೇ, ಸಿರಾಸ್ ಅವರ ಪತ್ನಿ ಮತ್ತು ಕುಟುಂಬಕ್ಕೆ ಅಭಿನಂದನೆ ಹೇಳಿದ್ದಾರೆ.
ಇರಾನ್ನ ಶರೀಫ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಅಸ್ಗರಿಯನ್ನು ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಿಂದ ರಹಸ್ಯ ಸಂಶೋಧನಾ ಮಾಹಿತಿ ಕದಿಯಲು ಯತ್ನಿಸಿದ ಆರೋಪದಲ್ಲಿ 2016 ರಲ್ಲಿ ಬಂಧಿಸಲಾಗಿತ್ತು. ಬಳಿಕ ಯುಎಸ್ನ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಗ್ವಿನ್ ಪ್ರಕರಣದ ವಿಚಾರಣೆ ನಡೆಸಿ ಕಳೆದ ವರ್ಷ ನವೆಂಬರ್ನಲ್ಲಿ ಅಸ್ಗರಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದರು. ಬಳಿಕ ಯುಎಸ್ನ ಆಂತರಿಕ ಭದ್ರತಾ ಸಚಿವಾಲಯ ಅಸ್ಗರಿಯನ್ನು ಗಡಿಪಾರು ಮಾಡಲು ಪ್ರಯತ್ನಿಸಿತ್ತು. ಆದರೆ, ಫೆಬ್ರವರಿ ಅಂತ್ಯದವರೆಗೂ ಅಸ್ಗರಿಯನ್ನು ತಮ್ಮ ರಾಷ್ಟ್ರದ ಪ್ರಜೆ ಎಂದು ಒಪ್ಪಿಕೊಂಡು ಪಾಸ್ಪೋರ್ಟ್ ನೀಡಲು ಇರಾನ್ ನಿರಾಕರಿಸಿತ್ತು.
ಕೊನೆಗೆ ಇರಾನ್ ಪಾಸ್ಪೋರ್ಟ್ ನೀಡಿದ ಬಳಿಕ ಮಾರ್ಚ್ 10, ಮಾರ್ಚ್ 18, ಮಾರ್ಚ್ 23, ಏಪ್ರಿಲ್ 1 ಮತ್ತು ಮೇ 1ರಂದು ಹೀಗೆ ಹಲವು ಬಾರಿ ಅಸ್ಗರಿಯನ್ನು ಇರಾನಿಗೆ ಕಳುಹಿಸಲು ಯುಎಸ್ ಪ್ರಯತ್ನಿಸಿತ್ತು. ಆದರೆ, ಕೊರೊನಾ ಲಾಕ್ಡೌನ್ ಹಿನ್ನೆಲೆ ವಿಮಾನಗಳು ರದ್ದುಗೊಂಡು ಅಸ್ಗರಿ ಸ್ವದೇಶಕ್ಕೆ ಮರಳು ತಡೆಯಾಗಿತ್ತು. ಕೊನೆಗೂ ಅಸ್ಗರಿ ಸ್ವದೇಶಕ್ಕೆ ಮರಳಿದ್ದಾರೆ.