ಜಕಾರ್ತಾ (ಇಂಡೋನೇಷ್ಯಾ): ಸೇನೆಗೆ ಮಹಿಳೆಯರು ನೇಮಕವಾಗಲು ಒಳಗಾಗಬೇಕಿದ್ದ ಕನ್ಯತ್ವ ಪರೀಕ್ಷೆಯನ್ನು ಇಂಡೋನೇಷ್ಯಾ ಸೇನೆ ರದ್ದುಗೊಳಿಸಿದೆ ಎಂದು ಸೇನಾ ಮುಖ್ಯಸ್ಥ ಆಂಡಿಕಾ ಪೆರ್ಕಾಸಾ ಮಾಹಿತಿ ನೀಡಿದ್ದಾರೆ.
ಸೇನೆಗೆ ಸೇರಲು ನಡೆಸುವ ಕನ್ಯತ್ವ ಪರೀಕ್ಷೆಯು ಯಾವುದೇ ವೈಜ್ಞಾನಿಕ ಮಾನ್ಯತೆಯನ್ನು ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದ ಏಳು ವರ್ಷಗಳ ನಂತರ ಇದನ್ನು ಇಂಡೋನೇಷ್ಯಾ ರದ್ದುಗೊಳಿಸಿದ್ದು, ಮಾನವ ಹಕ್ಕುಗಳ ಸಂಘಟನೆಗಳು ಈ ನಿರ್ಧಾರವನ್ನು ಸ್ವಾಗತಿಸಿವೆ.
ಎರಡು ಬೆರಳು ಬಳಸಿ ಕನ್ಯತ್ವ ಪರೀಕ್ಷೆ
ಮಹಿಳೆಯರ ಯೋನಿಯೊಳಗೆ ಎರಡು ಬೆರಳುಗಳನ್ನು ಬಳಸಿ ವೈದ್ಯರು ಮಹಿಳೆಯರ ಕನ್ಯತ್ವದ ಪರೀಕ್ಷೆ ನಡೆಸುತ್ತಾರೆ. ಮಹಿಳೆಯರು ಲೈಂಗಿಕ ಸಂಭೋಗಕ್ಕೆ ಒಳಗಾಗಿದ್ದರೆಯೇ ಎಂಬುದನ್ನು ತಿಳಿಯಲು ಹೀಗೆ ಮಾಡಲಾಗುತ್ತದೆ. ಮಾನವ ಹಕ್ಕುಗಳ ಸಂಘಟನೆಗಳು ಸೇನಾ ನೇಮಕಾತಿಗೆ ಇಂತಹ ಆಕ್ರಮಣಕಾರಿ ಯೋನಿ ಪರೀಕ್ಷೆಗಳನ್ನು ನಿಷೇಧಿಸಲು ಒತ್ತಾಯಿಸುತ್ತಾ ಬಂದಿತ್ತು.
ಸೇನೆಯು ಯಾವಾಗಲೂ ನೂತನ ವಿಷಯಗಳನ್ನು ಕಲಿಯಲು ಮತ್ತು ಸುಧಾರಿಸಲು ಪ್ರಯತ್ನಿಸುತ್ತದೆ. ದಶಕಗಳವರೆಗೆ ಜಾರಿಯಲ್ಲಿದ್ದ ಕನ್ಯತ್ವ ಪರೀಕ್ಷೆಯನ್ನ ಈ ವರ್ಷದ ಆರಂಭದಲ್ಲೇ ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮಗಳಿಗೆ ಆಂಡಿಕಾ ಪೆರ್ಕಾಸಾ ಹೇಳಿದ್ದು, ದಿನಾಂಕವನ್ನು ತಿಳಿಸಿಲ್ಲ.
'ಸಾಕ್ಷಿ ಬೇಕು'
ಇಂತಹ ಪರೀಕ್ಷೆಗಳು ಹೆಣ್ಣು ಮಕ್ಕಳಲ್ಲಿ ಅವಮಾನ, ಭಯ ಮತ್ತು ಆಘಾತವನ್ನು ಉಂಟುಮಾಡುತ್ತದೆ ಎಂದಿರುವ ಇಂಡೋನೇಷ್ಯಾದ ರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ಆಯೋಗವು ಇಂಡೋನೇಷ್ಯಾ ಸೇನೆಯ ಈ ನಿರ್ಧಾರವನ್ನು ಸ್ವಾಗತಿಸಿದೆ, ಆದರೆ ಈ ಪ್ರಕ್ರಿಯೆ ಮುಕ್ತಾಯಗೊಂಡಿರುವುದಕ್ಕೆ ಪುರಾವೆ ಬೇಕೆಂದು ಕೇಳಿದೆ.
ಹ್ಯೂಮನ್ ರೈಟ್ಸ್ ವಾಚ್ ಎಂಬ ಎನ್ಜಿಒ 'ಲಿಂಗ ಆಧಾರಿತ ಹಿಂಸೆಯ ರೂಪ' ಕೊನೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ.