ನವದೆಹಲಿ: ಇದೇ ಜನವರಿ 1 ರಂದು ಅಫ್ಘಾನಿಸ್ತಾನಕ್ಕೆ 5 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಿ ಉದಾರತೆ ಮೆರೆದಿದ್ದ ಭಾರತ, ಇಂದು ಮತ್ತೆ 2 ಟನ್ ಅಗತ್ಯ ವೈದ್ಯಕೀಯ ಸಾಮಗ್ರಿಯನ್ನು ತಾಲಿಬಾನ್ ಆಡಳಿತದ ದೇಶಕ್ಕೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದೆ.
ಕಾಬೂಲ್‌ನ ಇಂದಿರಾಗಾಂಧಿ ಆಸ್ಪತ್ರೆಗೆ ಸಾಮಗ್ರಿಗಳನ್ನು ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ. ಆ ದೇಶದ ಜನರೊಂದಿಗೆ ವಿಶೇಷ ಸಂಬಂಧ ಮುಂದುವರಿಸಲು ಮತ್ತು ಅವರಿಗೆ ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಆಹಾರ ಕೊರತೆ, ನಿರುದ್ಯೋಗ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಅಲ್ಲಿನ ಜನ ಎದುರಿಸುತ್ತಿದ್ದಾರೆ.