ನ್ಯೂಯಾರ್ಕ್(ಅಮೆರಿಕ): ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅವು ಯಾವಾಗಲೂ ಅವಿಭಾಜ್ಯ ಅಂಗವಾಗಿಯೇ ಇರಲಿವೆ ಎಂದು ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪುನರುಚ್ಚರಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿನ್ನೆ ಮಾತನಾಡಿದ ಯುಎನ್‌ಗೆ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ, ಈ ಪ್ರದೇಶದಲ್ಲಿ ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಒಳಗೊಂಡಿದೆ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳಿಂದ ತಕ್ಷಣವೇ ತೊರೆಯುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ ಎಂದು ಖಡಕ್ಕಾಗೇ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ ಕಾಶ್ಮೀರ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿರುವ ಸ್ನೇಹಾ ದುಬೆ, ಭಯೋತ್ಪಾದಕರನ್ನು ಸಕ್ರಿಯವಾಗಿ ಬೆಂಬಲಿಸುವ ಇತಿಹಾಸವನ್ನು ಇಸ್ಲಾಮಾಬಾದ್ ಹೊಂದಿದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಪಾಕ್ ದುರ್ವರ್ತನೆ ಇದೇ ಮೊದಲಲ್ಲ:
ಪಾಕಿಸ್ತಾನದ ನಾಯಕರು ನಮ್ಮ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡುವ ಮೂಲಕ ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ತನ್ನ ದೇಶದ ಕಷ್ಟದ ಸ್ಥಿತಿಯ ಬಗ್ಗೆ ವಿಶ್ವದ ಗಮನವನ್ನು ಬೇರೆಡೆಗೆ ತಿರುಗಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಭಯೋತ್ಪಾದಕರು ಉಚಿತ ಪಾಸ್ ಪಡೆದು ಅಲ್ಲಿ ಆನಂದಿಸುತ್ತಾರೆ. ಆದರೆ, ಸಾಮಾನ್ಯ ಜನರ ಜೀವನ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ತಲೆಕೆಳಗಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: "ಭಯೋತ್ಪಾದನೆಗೆ ಬೆಂಬಲಿಸುವ ಪಾಕ್ ವಿರುದ್ಧ ಕ್ರಮ ಅಗತ್ಯ".. ಕಮಲಾ ಹ್ಯಾರಿಸ್ ಪ್ರತಿಪಾದನೆ
ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವ, ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ಸ್ಥಾಪಿತ ಇತಿಹಾಸ ಹಾಗೂ ನೀತಿಯನ್ನು ಹೊಂದಿದೆ ಎಂದು ಸದಸ್ಯ ರಾಷ್ಟ್ರಗಳಿಗೆ ತಿಳಿದಿದೆ.
ಭಯೋತ್ಪಾದನೆ ಬಹಿರಂಗವಾಗಿ ಬೆಂಬಲಿಸುವ ರಾಷ್ಟ್ರ ಪಾಕ್
ಪಾಕ್ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ, ತರಬೇತಿ ನೀಡುವ, ಹಣಕಾಸು ನೀಡುವ ಹಾಗೂ ಶಸ್ತ್ರಸಜ್ಜಿತಗೊಳಿಸುವ ಜಾಗತಿಕವಾಗಿ ಗುರುತಿಸಲ್ಪಟ್ಟ ದೇಶವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಿಸಲ್ಪಟ್ಟ ಅತಿ ಹೆಚ್ಚು ಭಯೋತ್ಪಾದಕರನ್ನು ಹೋಸ್ಟ್ ಮಾಡುವ ಅವಿವೇಕದ ದಾಖಲೆಯನ್ನೂ ಹೊಂದಿದೆ ಎಂದು ಸ್ನೇಹಾ ದುಬೆ ಹೇಳಿದ್ದಾರೆ.
ಭಾರತದ ಆಂತರಿಕ ವಿಷಯವಾಗಿರುವ ಜಮ್ಮು- ಕಾಶ್ಮೀರದ ಬಗ್ಗೆ ಪಾಕ್ ಪ್ರಧಾನಿ ಪ್ರಸ್ತಾಪಿಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡ ದುಬೆ, ಪಾಕಿಸ್ತಾನದ ನಾಯಕನ ಮತ್ತೊಂದು ಪ್ರಯತ್ನಕ್ಕೆ ಉತ್ತರಿಸುವ ನಮ್ಮ ಹಕ್ಕನ್ನು ನಾವು ಬಳಸಿಕೊಳ್ಳುತ್ತೇವೆ. ನಮ್ಮ ದೇಶಕ್ಕೆ ಸಂಬಂಧಿಸಿದ ಆಂತರಿಕ ವಿಷಯಗಳನ್ನು ತರುವ ಮೂಲಕ ಹಾಗೂ ವಿಶ್ವ ವೇದಿಕೆಯಲ್ಲಿ ಸುಳ್ಳನ್ನು ಹೊರಹಾಕಿದ್ದಾರೆ ಎಂದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಇಮ್ರಾನ್ ಖಾನ್, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯನ್ನು ಬಯಸುತ್ತದೆ ಎಂದು ಪ್ರತಿಪಾದಿಸಿದ್ದ ಅವರು, ದಕ್ಷಿಣ ಏಷ್ಯಾದಲ್ಲಿ ಸುಸ್ಥಿರ ಶಾಂತಿಯು ಜಮ್ಮು ಮತ್ತು ಕಾಶ್ಮೀರ ವಿವಾದದ ಪರಿಹಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.