ನವದೆಹಲಿ: ಭಾರತವು ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಬುಧವಾರ ಆಯ್ಕೆಯಾಗಿದೆ. 193 ಸದಸ್ಯರ ಸಾಮಾನ್ಯ ಸಭೆಯಲ್ಲಿ 184 ಮತಗಳನ್ನು ಪಡೆದು ಭಾರತವು 7ನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವವನ್ನು ಪಡೆದುಕೊಂಡಿದೆ.
ಭಾರತದೊಂದಿಗೆ ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ಕೂಡ ಭದ್ರತಾ ಮಂಡಳಿ ಚುನಾವಣೆಯಲ್ಲಿ ಜಯಗಳಿಸಿವೆ. ಚುನಾವಣೆಯಲ್ಲಿ193 ಸದಸ್ಯ ರಾಷ್ಟ್ರಗಳು ಭಾಗಿಯಾಗಿದ್ದು, ಭಾರತವು 184 ಮತಗಳನ್ನು ಪಡೆದಿದೆ. 2021-22ರ ಅವಧಿಗೆ ಭಾರತವನ್ನು ಶಾಶ್ವತವಲ್ಲದ ಸ್ಥಾನಕ್ಕೆ ಸದಸ್ಯ ರಾಷ್ಟ್ರಗಳ ಅಗಾಧ ಬೆಂಬಲದೊಂದಿಗೆ ಆಯ್ಕೆ ಮಾಡಿದವು. ಜನವರಿ 1ರಿಂದ ಖಾಯಂ ಸದಸ್ಯ ರಾಷ್ಟ್ರವಾದ ಅಮೆರಿಕ, ಚೀನಾ, ಫ್ರಾನ್ಸ್, ರಷ್ಯಾ ಹಾಗೂ ಯುಕೆ ಜೊತೆಗೆ ಭಾರತ ಸಭೆಗಳಲ್ಲಿ ಕುಳಿತುಕೊಳ್ಳಲಿದೆ.
ಭಾರತವು 2021 - 22ರ ಅವಧಿಗೆ ಏಷ್ಯಾ - ಪೆಸಿಫಿಕ್ ವಿಭಾಗದಿಂದ ಶಾಶ್ವತವಲ್ಲದ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿತ್ತು. ಈ ಹಿಂದೆ 1950-1951, 1967-1968, 1972-1973, 1977-1978, 1984-1985, 1991-1992 ಮತ್ತು 2011-2012ರಲ್ಲಿ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯರಾಗಿ ಭಾರತ ಆಯ್ಕೆಯಾಗಿತ್ತು