ಇಸ್ಲಾಮಾಬಾದ್(ಪಾಕಿಸ್ತಾನ) : ಬಲೂಚಿಸ್ತಾನ್ ಪ್ರಾಂತ್ಯದಲ್ಲಿದ್ದ ಎರಡು ಸೇನಾ ಶಿಬಿರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ನಾಲ್ವರು ಸೈನಿಕರನ್ನು ಕೊಂದಿದ್ದಾರೆ ಎಂದು ಪಾಕಿಸ್ತಾನದ ಸಚಿವ ಶೇಖ್ ರಶೀದ್ ಗುರುವಾರ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ವಾಯವ್ಯದಲ್ಲಿ ಬಲೂಚಿಸ್ತಾನ ಪ್ರಾಂತ್ಯವಿದ್ದು, ಇಲ್ಲಿ ಆಗಾಗ್ಗೆ ದಾಳಿಗಳು ಸಂಭವಿಸುತ್ತಿರುತ್ತವೆ. ತಪಾಸಣಾ ಕೇಂದ್ರವೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ತು ಮಂದಿ ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದ ಘಟನೆ ಒಂದು ವಾರದ ಹಿಂದೆ ಇದೇ ಪ್ರಾಂತ್ಯದ ಕೆಚ್ ಜಿಲ್ಲೆಯಲ್ಲಿ ನಡೆದಿತ್ತು.
ಬುಧವಾರ ಸಂಜೆ ಎರಡು ಸೇನಾ ಶಿಬಿರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಒಂದು ಶಿಬಿರವು ನೌಷ್ಕಿ ನಗರದ ಸಮೀಪದಲ್ಲಿದ್ದರೆ ಮತ್ತು ಮತ್ತೊಂದು ಪಂಜಗುರ್ ಜಿಲ್ಲೆಯಲ್ಲಿದೆ ಎಂದು ರಶೀದ್ ಹೇಳಿದ್ದಾರೆ.
ಇದನ್ನೂ ಓದಿ: ಸೂಟಕೇಸ್ನಲ್ಲಿ ಮುಚ್ಚಿಟ್ಟು ಹಾಸ್ಟೆಲ್ಗೆ ಯುವತಿಯನ್ನ ಹೊತ್ತು ತಂದ ಲವರ್.. ಮುಂದಾಗಿದ್ದೇನು!?
ಎರಡೂ ಭಯೋತ್ಪಾದಕ ದಾಳಿಗಳನ್ನು ಪಾಕಿಸ್ತಾನಿ ಸೇನೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ನೌಷ್ಕಿಯಲ್ಲಿ ಒಂಬತ್ತು ಭಯೋತ್ಪಾದಕರನ್ನು ಮತ್ತು ಪಂಜ್‌ಗುರ್‌ನಲ್ಲಿ ಇನ್ನೂ ಆರು ಭಯೋತ್ಪಾದಕರನ್ನು ಪಾಕಿಸ್ತಾನ ಸೇನೆ ಕೊಂದಿದೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಸಚಿವರು ತಿಳಿಸಿದ್ದಾರೆ.
ದಾಳಿಯ ಹೊಣೆಯನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿದೆ. ಇದು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನಿ ಸೇನೆಗೆ ಸಿಕ್ಕ ಬಹುದೊಡ್ಡ ಯಶಸ್ಸು ಎಂದು ರಶೀದ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.