ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿದೆ. ನೆರೆಯ ಡ್ರ್ಯಾಗನ್ ದೇಶಕ್ಕೂ ಇದೇ ಬೇಕಾಗಿತ್ತು. ಯಾಕೆಂದರೆ ಈಗಾಗಲೇ ಆಫ್ಘನ್‌ನಲ್ಲಿ ಅಪರೂಪದ ಖನಿಜಗಳಿಗಾಗಿ ಹುಡುಕಾಟ ನಡೆಸುತ್ತಿರುವ ಚೀನಾ, ಅವುಗಳನ್ನು ಬಹುಬೇಗ ತನ್ನ ದೇಶಕ್ಕೆ ವರ್ಗಾಯಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಆ ದೇಶದ ಗಡಿ ಪ್ರಾಂತ್ಯ ಬದಕ್ಷಾನ್‌ನ ಜನಕ್ ಪ್ರದೇಶದಲ್ಲಿ 50 ಕಿಲೋ ಮೀಟರ್ ರಸ್ತೆ ನಿರ್ಮಿಸುತ್ತಿದೆ.
ರಸ್ತೆ ನಿರ್ಮಾಣದ ಯೋಜನೆಯನ್ನು 2020ರಲ್ಲಿ ಅಶ್ರಫ್ ಘನಿ ಸರ್ಕಾರ ಆರಂಭಿಸಿರುವುದು ವಿಶೇಷವಾಗಿದೆ. ಈಗಾಗಲೇ ಶೇ.20 ರಷ್ಟು ಕಾಮಗಾರಿ ಮುಗಿದಿದೆ. ಉಳಿದ 80 ರಷ್ಟು ಕಾಮಗಾರಿ ಪೂರ್ಣಗೊಂಡ ನಂತರ ಬದಕ್ಷಾನ್ ನಿಂದ ಚೀನಾದ ಷಿಂಜಿಯಾಂಗ್ ಪ್ರಾಂತ್ಯಕ್ಕೆ ಸಂಚಾರ ಸುಲಭವಾಗುತ್ತದೆ.
ಇದನ್ನೂ ಓದಿ: ತಾಲಿಬಾನ್ ಜತೆಗಿನ ‘ಸೌಹಾರ್ದ ಸಂಬಂಧ’ಕ್ಕೆ ನಾವು ಸಿದ್ಧ: ಚೀನಾ
ಅಫ್ಘಾನಿಸ್ತಾನದ ಮರುಭೂಮಿಯಲ್ಲಿ ಕಂಡು ಬರುವ ಅಪರೂಪದ ಖನಿಜಗಳನ್ನು ಹುಡುಕುತ್ತಿರುವ ಚೀನಾಕ್ಕೆ ಈ ರಸ್ತೆ ವರದಾನವಾಗಲಿದೆ. ಈ ಖನಿಜಗಳು ಕಂಪ್ಯೂಟರ್, ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳು, ಪವನ ಶಕ್ತಿ, ಟರ್ಬೈನ್‌ಗಳು ಹಾಗೂ ಹೈಬ್ರಿಡ್ ಕಾರುಗಳ ತಯಾರಿಕೆಯಲ್ಲಿ ನಿರ್ಣಾಯಕವಾಗಿವೆ. ಈ ನಿಟ್ಟಿನಲ್ಲಿ ಚೀನಾ ಈಗಾಗಲೇ ಅಫ್ಘಾನಿಸ್ತಾನದೊಂದಿಗೆ ಕೆಲವು ಒಪ್ಪಂದಗಳನ್ನೂ ಮಾಡಿಕೊಂಡಿದೆ. ತಾಲಿಬಾನ್ ಶೀಘ್ರದಲ್ಲಿ ಸ್ವಾಧೀನಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ರಸ್ತೆ ಪೂರ್ಣಗೊಂಡರೆ ಚೀನಾಕ್ಕೆ ವಾಣಿಜ್ಯಕವಾಗಿ ಮತ್ತಷ್ಟು ಲಾಭವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.