ಇಸ್ಲಾಮಾಬಾದ್: ಪಾಕಿಸ್ತಾನದ ಇಂಟರ್ನ್ಯಾಷನಲ್ ಏರ್ಲೈನ್ಸ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗುವುದು ಎಂಬ ಪಾಕಿಸ್ತಾನದ ನಿರೀಕ್ಷೆಯ ಹೊರತಾಗಿಯೂ, ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (ಇಎಎಸ್ಎ) ನಿಷೇಧ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ.
ಪಾಕ್ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಪಿಐಎ ಮೇಲಿನ ನಿಷೇಧವನ್ನು ತೆಗೆದುಹಾಕಲಾಗುವುದು ಎಂದು ಇಎಎಸ್ಎ ಹೇಳಿದೆ ಎಂದು ಪಾಕಿಸ್ತಾನ ಸುದ್ದಿಮಾಧ್ಯಮವೊಂದು ವರದಿ ಮಾಡಿದೆ.
ಸುರಕ್ಷತಾ ದೃಷ್ಟಿಯಿಂದ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಿಗೆ ಪಾಕಿಸ್ತಾನದ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನ ಸೇವೆ ನಿರ್ವಹಿಸದಂತೆ ಇಎಎಸ್ಎ ಜುಲೈನಲ್ಲಿ ಆರು ತಿಂಗಳವರೆಗೆ ನಿರ್ಬಂಧ ವಿಧಿಸಿತ್ತು.
ಕಮರ್ಶಿಯಲ್ ಪೈಲಟ್‌ಗಳಿಗೆ ಪರವಾನಗಿ ನೀಡುವ ವ್ಯವಸ್ಥೆಯ ಬಗ್ಗೆ ಇಎಎಸ್ಎ ಕಳವಳ ವ್ಯಕ್ತಪಡಿಸಿದ್ದು, ಇದನ್ನು ಸರಿಪಡಿಸಲಾಗುವುದು. ಶೀಘ್ರದಲ್ಲೇ ಯುರೋಪಿಯನ್ ದೇಶಗಳಲ್ಲಿ ಪಿಐಎ ವಿಮಾನಗಳ ಮೇಲೆ ವಿಧಿಸಲಾಗಿದ್ದ ನಿಷೇಧ ರದ್ದಾಗುವ ನಿರೀಕ್ಷೆ ಇದೆ ಎಂದು ಪಾಕಿಸ್ತಾನ ವಿಮಾನಯಾನ ಸಚಿವ ಗುಲಾಮ್ ಸರ್ವಾರ್ ಖಾನ್ ಅವರು ಹೇಳಿದ್ದಾರೆ.
ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಲಿಕಾಪ್ಟರ್ ಪತನ : ನಾಲ್ವರು ಪಾಕ್ ಸೈನಿಕರು ಸಾವು
ಇನ್ನೊಂದೆಡೆ, ಈ ತಿಂಗಳ ಆರಂಭದಲ್ಲಿ ಬ್ರಿಟಿಷ್ ವಿಮಾನಯಾನ ವರ್ಜಿನ್ ಅಟ್ಲಾಂಟಿಕ್ ತನ್ನ ನೇರ ವಿಮಾನ ಸೇವೆಯನ್ನು ಇಸ್ಲಾಮಾಬಾದ್ ಮತ್ತು ಲಾಹೋರ್‌ಗೆ ಪ್ರಾರಂಭಿಸಿದೆ. ಬ್ರಿಟಿಷ್ ಏರ್‌ವೇಸ್ ಈಗಾಗಲೇ ತನ್ನ ಸೇವೆಯನ್ನು ಇಸ್ಲಾಮಾಬಾದ್‌ನಿಂದ ಲಾಹೋರ್‌ಗೆ ವಿಸ್ತರಿಸಿದೆ.